ನಕಲಿ ಚಿಕಿತ್ಸಾ ಕೇಂದ್ರಗಳ ಮೇಲೆ ದಾಳಿ, ಬಂಧನ
ಸೂಲಿಬೆಲೆ: ಪಟ್ಟಣದಲ್ಲಿ ಕಾರ್ಯನರ್ವಹಿಸುತ್ತಿದ್ದ ನಕಲಿ ಚಿಕಿತ್ಸೆ ಕೇಂದ್ರಗಳ ಮೇಲೆ ಮಂಗಳವಾರ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ದಾಳಿ ಮಾಡಿ ಒಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಲ್ಯಾಬ್ ಹೆಸರನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ ಎಂದು ಇಬ್ಬರಿಗೆ ಎಚ್ಚರಿಕೆಯ ಮುಚ್ಚಿಳಿಕೆ ಪತ್ರ ಬರೆಯಿಸಿಕೊಂಡು ಬಿಡುಗಡೆ ಮಾಡಿದ್ದಾರೆ.
ಸೂಲಿಬೆಲೆ ಪಟ್ಟಣದಲ್ಲಿ ಕೆಲ ದಿನಗಳಿಂದ ಕದ್ದು ಮುಚ್ಚಿ ನಕಲಿ ಕ್ಲಿನಿಕ್ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಜಿಲ್ಲಾ ವೈಧ್ಯಾಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿತು. ಜಯಶ್ರೀ ಕ್ಲೀನಿಕ್ ಹೆಸರಿನಲ್ಲಿ ಮನೆಯೊಂದರಲ್ಲಿ ಆಸ್ಪತ್ರೆಯಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದ ನಾರಾಯಣಸ್ವಾಮಿ ಎಂಬ ವೈದ್ಯರ ಮನೆಗೆ ದಾಳಿ ಮಾಡಿದ ತಂಡ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ಮಾಡಿತು. ಸೂಕ್ತ ದಾಖಲೆಗಳನ್ನು ನೀಡಲು ವಿಫಲರಾದ ನಾರಾಯಣಸ್ವಾಮಿ ಅವರನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ ಅಧಿಕಾರಿಗಳು ಮನೆಯಲ್ಲಿನ ಕೇಂದ್ರಕ್ಕೆ ಬೀಗ ಮುದ್ರೆ ಹಾಕಿದರು. ನಂತರ ಸಪ್ತಗಿರಿ ಲ್ಯಾಬ್ ಹೆಸರಿನಲ್ಲಿ ನಡೆಯುತ್ತಿದ್ದ ಕೇಂದ್ರಕ್ಕೆ ದಾಳಿ ಮಾಡಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಈ ವೇಳೆ ಕೆಲವೊಂದು ಮಾತ್ರೆಗಳ ಸಾಮಗ್ರಿಗಳು ಸಿಕ್ಕಿದ್ದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಯಿತು. ಲ್ಯಾಬ್ ಹೆಸರಿನಲ್ಲಿ ಕ್ಲಿನಿಕ್ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಇದೆ. ಲ್ಯಾಬ್ನಲ್ಲಿ
ಮಾತ್ರೆಗಳು ಏಕೆ, ಲ್ಯಾಬ್ಗೆ ಬಂದು ಚಿಕಿತ್ಸೆ ಪಡೆದವರ ವಿವರದ ದಾಖಲೆ ನೀಡಿ ಎಂದು ಅಧಿಕಾರಗಳ ಪ್ರಶ್ನೆಗೆ ಸೂಕ್ತ ದಾಖಲೆ ನೀಡಲು ವಿಫಲರಾದ ಕಾರಣ ಕೇಂದ್ರಕ್ಕೆ ಬೀಗ ಹಾಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು.
ಲ್ಯಾಬ್ನಲ್ಲಿ ಪಾಲಿಸಬೇಕಿರುವ ಸೂಚನೆಗಳ ಬಗ್ಗೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸೂಕ್ತ ಮುನ್ನೆಚ್ಚರಿಕೆ ಹಾಗೂ ಎಚ್ಚರಿಕೆ ಪತ್ರಗಳನ್ನು ಬರೆಯಿಸಿಕೊಂಡು ಬಿಡುಗಡೆ ಮಾಡಲಾಯಿತು. ನಾರಾಯಣಸ್ವಾಮಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಜಿಲ್ಲಾ ಆಯೂಷ್ ಅಧಿಕಾರಿ ರಾಮಲಿಂಗಯ್ಯ, ಡಾ.ರೋಜಿ, ತಾಲೂಕು ವೈದ್ಯಾಧಿಕಾರಿ ಡಾ. ಶಕೀಲಾ, ಹೊಸಕೋಟೆ ತಾ.ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ನಾಗರಾಜ್, ಉಪತಹಸೀಲ್ದಾರ್ ಗೌತಮ್, ಡಾ.ಚಂದ್ರಶೇಖರ್ ದಾಳಿಯಲ್ಲಿ ಭಾಗವಹಿಸಿದ್ದರು.