ಬೃಹತ್ ಪ್ರತಿಭಟನಾ ಸಭೆಗೆ ಚನ್ನಪಟ್ಟಣ ತಾ.ನಿಂದ 2 ಸಾವಿರಕ್ಕೂ ಹೆಚ್ಚು ಮಂದಿ
ಚನ್ನಪಟ್ಟಣ: ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ನ.27 ರಂದು ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಗೆ ತಾಲೂಕಿನಿಂದ 2ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸು.ತ.ರಾಮೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬರದಿಂದ ಕಂಗಾಲಾಗಿರುವ ಬಯಲು ಸೀಮೆಯ 6 ಜಿಲ್ಲೆಗಳ ಜನ- ಜಾನುವಾರು ಉಳಿಯ ಬೇಕೆಂದರೆ ಪರಮಶಿವಯ್ಯ ವರದಿ ಅನುಷ್ಠಾನದ ಜರೂರತ್ತು ಸಾಕಷ್ಟಿದ್ದು ಇದಕ್ಕಾಗಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಮಂಡಿಸಲು ನ. 27 ರಂದು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿ ಕೊಂಡಿರುವುದಾಗಿ ತಿಳಿಸಿದರು.
ನ.27 ರಂದು ರಾಮನಗರ ಎಪಿಎಂಸಿ ಯಾರ್ಡ್ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಕಂದಾಯ ಭವನ ತಲುಪಿ ಜಿಲ್ಲಾಧಿಕಾರಿಗೆ ನಮ್ಮ ಹಕ್ಕೊತ್ತಾಯ ಸಲ್ಲಿಸಲಿದ್ದು ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಯ ಕಾರ್ಯಕರ್ತರು ಸ್ವಪ್ರೇರಣೆಯಿಂದ ಭಾಗವಹಿಸಲಿದ್ದಾರೆ ಎಂದರು.
ಜನಜೀವನ ಅಸ್ತವ್ಯಸ್ತ: ಕಳೆದ 16 ವರ್ಷಗಳಿಂದ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗಿದ್ದು ಮಳೆ- ಬೆಳೆ ಇಲ್ಲದೆ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಅಂತರ ಜಲದ ಮಟ್ಟ ಸಾವಿರ ಅಡಿಗಳ ಆಳಕ್ಕೆ ಕುಸಿದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ತೆಂಗು, ಮಾವು ಬೆಳೆಗಳು ಒಣಗಿ ರೈತರ ಬದುಕು ಅತಂತ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಬಹಳಷ್ಟಿದೆ ಎಂದರು.
2.5ಲಕ್ಷ ಎಕರೆಗೆ ನೀರಾವರಿ: ಪರಮಶಿವಯ್ಯ ವರದಿ ಜಾರಿಗೊಂಡಿದ್ದೇ ಆದಲ್ಲಿ ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ 2.50ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದ್ದು ಬರದಿಂದ ನಿಸ್ತೇಜಗೊಂಡಿರುವ ರೇಷ್ಮೆನಾಡಿನಲ್ಲಿ ಜೀವಸಂಚಾರವಾಗಲಿದೆ ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ತಿಳಿಸಿದರು.
ಮಳೆಯ ಕೊರತೆಯಿಂದಾಗಿ ಜಿಲ್ಲೆಯ 793 ಕೆರೆಗಳು ತುಂಬಿ ದಶಕಗಳೇ ಕಳೆದು ಹೋಗಿವೆ. ಯೋಜನೆ ಅನುಷ್ಠಾನ ಗೊಂಡಿದ್ದೇ ಆದಲ್ಲಿ ಜಿಲ್ಲೆಗೆ 30.24 ಟಿಎಂಸಿ ನೀರು ಲಭ್ಯವಾಗಲಿದ್ದು ಇದರಿಂದ ಬರದ ನಾಡಿನಲ್ಲಿ ಸಜೀವ ಪರಿಸರ ನಿರ್ಮಾಣ ಗೊಳ್ಳಲಿದೆ ಎಂದರು.