ಶಾಸಕ ಸ್ಥಾನದಿಂದ ಸಂಭಾಜಿ ಪಾಟೀಲ್ ಅನರ್ಹಗೊಳಿಸಿ
ಕ.ಪ್ರ. ವಾರ್ತೆ ರಾಮನಗರ ನ. 26
ಸದನದಲ್ಲೇ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಭಾಜಿ ಪಾಟೀಲ್ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಹಾಗೂ ರಾಜ್ಯದಿಂದ ಗಡೀಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಐಜೂರು ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಮಹಾಮೇಳಾವ ನಡೆಸಲು ಅನುಮತಿ ನೀಡಿರುವ ಬೆಳಗಾವಿ ಜಿಲ್ಲಾಡಳಿತ, ಗೃಹಮಂತ್ರಿ ಕೆ.ಜೆ.ಜಾರ್ಜ್ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಶಾಸಕ ಸಂಬಾಜಿ ಪಾಟೀಲ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ. ಶ್ರೀಧರ್ ಹೊಸೂರು ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಪದೇ ಪದೇ ಕ್ಯಾತೆ ತೆಗೆಯುವ ಮೂಲಕ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಭಂಗ ಉಂಟು ಮಾಡುತ್ತಿರುವ ಎಂಇಎಸ್ ಪುಂಡರನ್ನು ಗಡೀಪಾರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಗಂಭೀರವಾಗಿ ಪರಿಗಣಿಸಿ: ಕನ್ನಡ ಭಾಷೆ ಬಲ್ಲವರಾಗಿದ್ದರೂ ಸದನದಲ್ಲಿ ಮರಾಠಿಯಲ್ಲಿ ಮಾತನಾಡಿ, ಕನ್ನಡಿಗರ ವಿರುದ್ಧ ಉದ್ಧಟತನದ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ರಾಜ್ಯದ ವಿಧಾನಸಭಾ ಸದಸ್ಯನಾಗಿದ್ದುಕೊಂಡು, ರಾಜ್ಯ ಸರ್ಕಾರದ ಹೆಣ ಹೊರುತ್ತೇನೆಂದು ಹೇಳಿಕೆ ನೀಡಿರುವ ಸಂಭಾಜಿ ಪಾಟೀಲ್ ಅವರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ, ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕು ಎಂದರು.
ಗಡಿ ಭಾಗದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ, ಅಧಿವೇಶನ ನಡೆಯುವ ಸಂದರ್ಭದಲ್ಲೇ ಮರಾಠಿ ಮಹಾಮೇಳಾವಕ್ಕೆ ಅನುಮತಿ ನೀಡಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಹೇಳಿದರು.
ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯುವಂತೆ ಪ್ರೋತ್ಸಾಹಿಸದ ಎಂಇಎಸ್ ಸಂಘಟನೆ ಭಾಷೆಯ ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದು ಅಧಿವೇಶನ ನಡೆಯಲು ಅಡ್ಡಿಪಡಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗಳು ಭಾಷಾ ಸಾಮರಸ್ಯದಿಂದ ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತಿದ್ದಾರೆ. ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಇವರಿಬ್ಬರ ನಡುವೆ ವೈಷಮ್ಯದ ವಿಷ ಬೀಜ ಬಿತ್ತಿ, ಎಂಇಎಸ್ ಪುಂಡತನ ಮೆರೆಯುತ್ತಿದೆ ಹಾಗೂ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಇನ್ನು ಮುಂದೆ ಇವರ ಆಟ ನಡೆಯಲು ಬಿಡಬಾರದು ಎಂದರು.
ಕನ್ನಡದ ನಾಮ ಫಲಕಗಳನ್ನು ಕಿತ್ತು ಹಾಕಿ ಮಹಾರಾಷ್ಟ್ರ ರಾಜ್ಯ ಎಂದು ಮರಾಠಿ ಭಾಷೆಯಲ್ಲಿ ನಾಮ ಫಲಕಗಳನ್ನು ಹಾಕುವುದು, ಪಾಲಿಕೆ ಕಚೇರಿ ಮೇಲೆ ಮಹಾರಾಷ್ಟ್ರ ಧ್ವಜ ಹಾರಿಸುವ ನಾಡ ದ್ರೋಹ ಕೆಲಸವನ್ನು ಎಂಇಎಸ್ ಮಾಡುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯನ್ನು ಐದಾರು ಮಂದಿ ಕನ್ನಡಿಗರು ಪ್ರತಿನಿಧಿಸುತ್ತಿದ್ದಾಗ್ಯೂ ಅಲ್ಲಿನ ವಿಧಾನಸಭೆಗೆ ನಿಷ್ಠೆಯಿಂದಿದ್ದಾರೆ. ಆದರೆ ಕೇವಲ ಇಬ್ಬರು ಸದಸ್ಯರಿರುವ ಇವರು ದುಂಡಾವರ್ತಿಯಿಂದ ವರ್ತಿಸಿ, ಕನ್ನಡಿಗರಿಗೆ ಅವಮಾನವಾಗುವಂತ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮತ ಬ್ಯಾಂಕ್ ಸೃಷ್ಟಿಗಾಗಿ ರಾಜ್ಯ ಸರ್ಕಾರ ಕನ್ನಡದ ನೆಲದಲ್ಲಿ ಎಂಇಎಸ್ಗೆ ಮೇಳಾವ ನಡೆಸಲು ಅನುಮತಿ ನೀಡಿದೆ. ಇದೇ ಮುಂದುವರಿದರೆ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾಗಿ ಬರಬಹುದು. ಸರ್ಕಾರ ತನ್ನ ನಿಲುವು ಬದಲಿಸಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ತಪ್ಪಿದಲ್ಲಿ ನಾಡಿನಲ್ಲಿ ರಕ್ತ ಕ್ರಾಂತಿಯಾಗುವ ಸಂಭವವಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನಿಲ್, ಜಿಲ್ಲಾ ಉಪಾಧ್ಯಕ್ಷ ಕೊತ್ತೀಪುರ ರಾಮಂಜು, ಸಂಘಟನಾ ಕಾರ್ಯದರ್ಶಿ ರಮಾನಂದಗೌಡ, ನಗರ ಘಟಕದ ಅಧ್ಯಕ್ಷ ಹೇಮಂತ್ಪ್ದಾಧಿಕಾರಿಗಳಾದ ಪುಟ್ಟೇಗೌಡ, ಚನ್ನಕೇಶವ, ರೇಣುಕಾಪ್ರಸಾದ್, ರಘು, ಆನಂದ, ಕೃಷ್ಣಪ್ಪ, ರಂಗಪ್ಪ, ಉಮೇಶ, ಮಂಜು, ನೆಲಮಲೆ ಗಂಗಾಧರ್, ರವಿಕುಮಾರ್, ಪ್ರಶಾಂತ ಮತ್ತಿತರರು ಭಾಗವಹಿಸಿದ್ದರು.