ಆರು ಕಾಡಾನೆಗಳ ಗುಂಪಿನಿಂದ ಬೆಳೆ ನಾಶ, ಅಪಾರ ನಷ್ಟ
ನೆಲಮಂಗಲ: ಆರು ಕಾಡಾನೆಗಳ ಗುಂಪು ತಾಲೂಕಿನ ಸೋಂಪುರದ ಬೀರಗೊಂಡನಹಳ್ಳಿಯ ಜಮೀನಿನಲ್ಲಿ ಬೆಳೆದಿದ್ದ ಬತ್ತ, ಬಾಳೆ ಹಾಗೂ ಅಡಕೆ ಬೆಳೆಯನ್ನು ತಿಂದು ನಾಶ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ ತುಮಕೂರು ತಾಲೂಕಿನಿಂದ ಬಂದಿರುವ ಆರು ಕಾಡಾನೆಗಳ ಗುಂಪು ಜಮೀನಿನಲ್ಲಿ ಬೆಳೆದು ನಿಂತಿದ್ದ ರಾಗಿ, ಬತ್ತವನ್ನು ಹಾಳು ಮಾಡಿ ವೀರಸಾಗರ ಕಾಡಿನ ಹಳ್ಳದಲ್ಲಿ ಬೀಡು ಬಿಟ್ಟಿವೆ. ರೈತರು ಬೆಳೆದಿದ್ದ ಬೆಳೆಯನ್ನು ತಿಂದು ಹಾಕಿದ್ದು ಲಕ್ಷಾಂತರ ರು. ಮೌಲ್ಯದ ಬೆಳೆಯನ್ನು ಹಾಳು ಮಾಡಿವೆ. ಈಗ ಈ ಕಾಡಾನೆಗಳನ್ನು ಶೀಘ್ರವಾಗಿ ಸಾವನದುರ್ಗ ಕಾಡಿಗೆ ಸೇರಿಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಅರಣ್ಯ ಸಿಬ್ಬಂದಿಯಿಂದ ಗುಂಪು ಗುಂಪಾಗಿ ಬರುತ್ತಿರುವ ಕಾಡಾನೆಗಳು ಮತ್ತು ಚಿರತೆಯ ದಾಳಿಯನ್ನು ನಿಯಂತ್ರಿಸಲು ಈಗಿರುವ ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.