ಒಳಪಂಗಡ ಒಂದಾದರೆ ಒಕ್ಕಲಿಗರ ಶಕ್ತಿ ಅನನ್ಯ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.27
ಒಕ್ಕಲಿಗ ಜನಾಂಗದ ಎಲ್ಲ ಒಳಪಂಗಡಗಳು ಒಂದಾಗಿ ಸಂಘಟಿತರಾಗಬೇಕು. ಆಗ ಮಾತ್ರ ಜನಾಂಗದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ನಡೆದ ತಾಲೂಕು ಕುಂಚಿಟಿಗರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರಛು.
ಸಮಾಜದ ಅಭಿವೃದ್ಧಿಯಲ್ಲಿ ಕುಂಚಿಟಿಗ ಜನಾಂಗ ತೊಡಗಿಸಿಕೊಳ್ಳುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಬೇಕು. ಜನಾಂಗದಲ್ಲಿ ಹೆಚ್ಚು ಮಂದಿ ವಿದ್ಯಾವಂತರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಂಘಟನೆಗಳು ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ ಸಂಶೋಧಕ ತಾಲೂಕಿನ ಸಕ್ಕರೆಗೊಲ್ಲಹಳ್ಳಿಯ ಡಾ.ನಾಗರಾಜಗೌಡ ಮಾತನಾಡಿ, ಇಂದಿನ ಯುವಪೀಳಿಗೆಯ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣಕ್ಕಷ್ಟೇ ಸೀಮಿತವಾಗಿದ್ದಾರೆ. ಇದು ಸರಿಯಲ್ಲ. ಹಲವು ಬಗೆಯ ರಚನಾತ್ಮಕ ಕ್ಷೇತ್ರಗಳಲ್ಲಿ ಗುರ್ತಿಸಿಕೊಳ್ಳುವ ಅವಕಾಶಗಳಿವೆ. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ದೇಶದಲ್ಲಿ ಸಂಶೋಧನಾ ಕ್ಷೇತ್ರ ನಿರೀಕ್ಷತ ಮಟ್ಟದಲ್ಲಿ ಬೆಳೆದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯದ ಆಲೋಚನೆ ಮಾಡುವ ಯುವಜನರು ಈ ಕ್ಷೇತ್ರಗಳಲ್ಲಿ ಗುರ್ತಿಸಿಕೊಳ್ಳಬೇಕು. ವೈದ್ಯರು ಔಷಧಿಗಳನ್ನು ರೋಗಗಳಿಗೆ ತಿಳಿಸಬಹುದೇ ವಿನಃ ಔಷಧಗಳನ್ನು ಸಂಶೋಧಿಸುವುದಿಲ್ಲ. ಔಷಧಗಳನ್ನು ಸಂಶೋಧಿಸುವ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಮಹತ್ವದ ಕೆಲಸ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರ ಕೂಡ ಈ ವಲಯಕ್ಕೆ ಹೆಚ್ಚಿನ ಅವಕಾಶ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಶ್ರೀರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಆರ್.ಕೆಂಪರಾಜು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತಿಮ್ಮೇಗೌಡ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ವೆಂಕಟೇಶ್, ಬಂಡಯ್ಯನಪಾಳ್ಯದ ಪ್ರಗತಿಪರ ಕೃಷಿಕ ಚಿಕ್ಕತಿಮ್ಮಯ್ಯ ಅವರನ್ನು ಅಭಿನಂದಿಸಲಾಯಿತು. ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವೂ ನಡೆಯಿತು.
ಟಿಎಪಿಎಂಸಿಎಸ್ ಅಧ್ಯಕ್ಷ ವಿ.ಆಂಜನಪ್ಪ, ರಾಜ್ಯ ಕುಂಚಿಟಿಗರ ಸಂಘದ ನಿರ್ದೇಶಕ ಎನ್.ಲೋಕೇಶ್, ಸಂಘದ ಉಪಾಧ್ಯಕ್ಷ ಬೈಯಪ್ಪನಹಳ್ಳಿ ನಾಗರಾಜ್, ನಗರಸಭಾ ಮಾಜಿ ಸದಸ್ಯ ಚಂದ್ರಶೇಖರ್, ಸಂಘದ ಕಾರ್ಯದರ್ಶಿ ಮುತ್ತುರಾಜ್ ಭಾಗವಹಿಸಿದ್ದರು.