ಜಾನಪದ ಕಲೆ ಮೂಲೆಗುಂಪು
ಚನ್ನಪಟ್ಟಣ: ಸಮಾಜದ ಮೇಲ್ವರ್ಗದ ದಬ್ಬಾಳಿಕೆಯಿಂದಾಗಿ ಮೂಲೆಗುಂಪಾಗಿದ್ದ ಜನಾಂಗ ಕಟ್ಟಿ ಬೆಳೆಸಿದ ಜಾನಪದ ಕಲೆ ಇತ್ತೀಚಿನ ದಿನಗಳಲ್ಲಿ ಮೂಲೆಗುಂಪಾಗುತ್ತಿದೆ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಪಿ.ಜೆ.ಗೋವಿಂದರಾಜು ವಿಷಾದಿಸಿದರು.
ತಾಲೂಕಿನ ಕುಂತೂರು ದೊಡ್ಡಿ ಗ್ರಾಮದಲ್ಲಿ ವೈಭವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ದೃಶ್ಯಮಾಧ್ಯಮದ ಅಬ್ಬರದಿಂದಾಗಿ ಜಾನಪದ ಕಲೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲವಾಗಿದ್ದು, ಇದು ಕಲೆಯ ಬೆಳವಣಿಗೆಗೆ ಇದು ಮಾರಕವಾಗಿದೆ ಎಂದರು.
ಜಾನಪದ ಸಾಹಿತ್ಯ ತನ್ನದೇ ಆದ ವಿಶಿಷ್ಟತೆ ಹೊಂದಿದ್ದು ಸಮಾಜದ ಶೋಷಿತ ವರ್ಗದ ಮಂದಿ ತಮ್ಮ ಅನುಭವದ ಬುತ್ತಿಯನ್ನು ಈ ಸಾಹಿತ್ಯದಲ್ಲಿ ಬಿಚ್ಚಿಟ್ಟಿದ್ದಾರೆ. ಜನಪದ ನೃತ್ಯ, ಕ್ರೀಡೆಗಳು ಆಯಾ ಪ್ರದೇಶದ ನಿಜವಾದ ಇತಿಹಾಸದ ಕುರುಹುಗಳಾಗಿದ್ದು ಇಂತಹ ಜಾನಪದವನ್ನು ನಾವು ಯಾವುದೇ ಕಾರಣಕ್ಕೂ ಮರೆಯಬಾರದು ಎಂದರು.
ಜಾನಪದ ಕಲೆಗೆ ಸೂಕ್ತ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಟ್ರಸ್ಟ್ಗಳು ಶ್ರಮಿಸಬೇಕಿದ್ದು, ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಗಳಿಗೆ ವೇದಿಕೆ ನಿರ್ಮಿಸುವ ಕಾರ್ಯಕ್ಕೆ ಟ್ರಸ್ಟ್ಗಳು ಮುಂದಾಗ ಬೇಕಿದೆ ಎಂದ ಅವರು, ಇಂತಹ ಕಾರ್ಯಕ್ಕೆ ನಾನು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ತಾಲೂಕು ಕಾರ್ಯದರ್ಶಿ ವಿಜಯ್ರಾಂಪುರ, ಜನಪದದಿಂದ ದೂರಾಗುತ್ತಿರುವ ಯುವಜನತೆಯನ್ನು ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯತ್ತ ಸೆಳೆಯುವ ಕಾರ್ಯಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಜಗತ್ತಿನ ಎಲ್ಲಾ ಸಾಹಿತ್ಯ ಪ್ರಕಾರಗಳಿಗೆ ಜಾನಪದ ಸಾಹಿತ್ಯ ಮೂಲವಾದುದ್ದು, ಸದಭಿರುಚಿಯಲ್ಲದ ಹಾಡುಗಳಿಗೆ ಮನ್ನಣೆ ನೀಡುವ ನಾವು ಜಾನಪದ ದಂತಹ ಅಮೂಲ್ಯ ಸಾಹಿತ್ಯವನ್ನು ಕಡೆಗಣಿಸುತ್ತಿದ್ದು ಇದು ಸಮಾಜದ ಹಲವಾರು ಅಪಾಯಗಳಿಗೆ ಎಡೆಮಾಡಿ ಕೊಟ್ಟಿದೆ ಎಂದರು.
ವಿದ್ಯಾರ್ಥಿ ಯುವ ಜನತೆಯಲ್ಲಿ ಜಾನಪದವನ್ನು ಬಿತ್ತರಿಸುವ ಕಾರ್ಯನಡೆಯ ಬೇಕಿದ್ದು ಪಠ್ಯಪುಸ್ತಕದಲ್ಲಿ ಜಾನಪದ ಸಾಹಿತ್ಯವನ್ನು ಹೆಚ್ಚಿನದಾಗಿ ಅಳವಡಿಸುವ ಮೂಲಕ ಮಕ್ಕಳಲ್ಲಿ ಜಾನಪದ ಸಾಹಿತ್ಯದ ಮಹತ್ವವನ್ನು ತಿಳಿಸಬೇಕದ ಅಗತ್ಯತೆ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಕಲಾ ಪ್ರಕಾರವಾದ ಡೊಳ್ಳು, ಪೂಜೆ, ತಮಟೆ ಕುಣಿತಗಳನ್ನು ಏರ್ಪಡಿಸಲಾಗಿತ್ತು. ಆನಂದ್ ಮತ್ತು ನಾರಾಯಣಮ್ಮ ತಂಡದಿಂದ ಜಾನಪದ ಗೀತಗಾಯನ ನಡೆಯಿತು. ಶಿಕ್ಷಕರಾದ ರೇಣುಕಮ್ಮ, ಲಲಿತ, ಮಂಗಳಗೌರಿ, ಪ್ರಭಾವತಿರನ್ನು ಸನ್ಮಾನಿಸಲಾಯಿತು.
ತಿಟ್ಟಮಾರನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಜಯಮ್ಮ, ಸದಸ್ಯರಾದ ಕೆಂಗಲ್ ಮೂರ್ತಿ, ಶೇಖರಾಚಾರ್, ಎಡಿಎಂಸಿ ಅಧ್ಯಕ್ಷೆ ಸುಮಿತ್ರಾ, ಸಾಗರ್ ಉಪಸ್ಥಿತರಿದ್ದರು. ಟ್ರಸ್ಟ್ನ ಸದಸ್ಯ ಕೇಶವ ಮೂರ್ತಿ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ್ ವಂದಿಸಿದರು.