ಬಿಜೆಪಿ ಮುಖಂಡರ ಮೇಲಿನ ಹಲ್ಲೆ ಖಂಡನೆ
ಕ.ಪ್ರ.ವಾರ್ತೆ ಸೂಲಿಬೆಲೆ ನ.27
ಹೋಬಳಿಯ ಅರಸನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಶಿವಪ್ಪ ಹಾಗೂ ಇವರ ಬೆಂಬಲಿಗರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ಎಸೆಗುತ್ತಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸೂಲಿಬೆಲೆ ಪಟ್ಟಣದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಜನತಾ ಕಾಲೊನಿಯಿಂದ ಹತ್ತಾರು ಮುಖಂಡರೊಂದಿಗೆ ಮೆರವಣಿಗೆ ಮೂಲಕ ನಡೆದು ಬಂದ ಪ್ರತಿಭಟನೆಕಾರರು, ಹೊಸಕೋಟೆ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರಕ್ಕೆ ಬಂದ ಮೇಲೆ ಆಡಳಿತ ಕುಸಿದು ದೌರ್ಜನ್ಯಗಳು ಹೆಚ್ಚಾಗಿವೆ. ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡಿ ವಿನಾಕಾರಣ ಕಿರುಕುಳ ಹಲ್ಲೆ, ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಸಕರಿಗೆ ಧಿಕ್ಕಾರ ಎಂದು ಘೋಷಣಿಗಳನ್ನು ಕೂಗುತ್ತಾ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ದೇವನಹಳ್ಳಿ ಕ್ರಾಸ್ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಕ್ರಾಸ್ನಿಂದ ಹಾದೂ ಹೋಗಿರುವ ರಾ.ಹೆ.207ರಲ್ಲಿ ಧರಣಿ ಕುಳಿತು ರಸ್ತೆ ತಡೆ ಮಾಡಿದರು. ಸುಮಾರು 1 ಗಂಟೆ ಕಾಲ ಹೆದ್ದಾರಿ ಕುಳಿತ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮುಖಂಡ ಚಿ.ನಾ ರಾಮು ಮಾತನಾಡುತ್ತಾ, ಶಾಸಕ ನಾಗರಾಜ್ ಅವರ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗಿದೆ. ಬೆಂಬಲಿಗರ ದೌರ್ಜನ್ಯಕ್ಕೆ ಬಿಜೆಪಿ ಮುಖಂಡರು, ಕಾರ್ಯಕರ್ತರು ನೋವು ಅನುಭವಿಸುವಂತಾಗಿದೆ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮುತ್ತಿಗೆ: ಹೆದ್ದಾರಿ ತಡೆನಂತರ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನೆಕಾರರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕುಳಿತರು. ಬಿಜೆಪಿ ಹಿರಿಯ ಮುಖಂಡ ಬಿ.ಎನ್. ಗೋಪಾಲಗೌಡ, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ತಾ.ಅಧ್ಯಕ್ಷ ಮುನಿಯಪ್ಪ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ವಿಜಯಕುಮಾರ್, ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿ, ಬೆಂಬಲಿಗರ ಅಟ್ಟಾಹಾಸ, ದ್ವೇಷದ ರಾಜಕಾರಣ, ತಾಲೂಕು ಕಚೇರಿಯಲ್ಲಿ ಬೆಂಬಲಿಗರ ಉಪಟಳ, ಅಧಿಕಾರ ದುರ್ಬಳಕೆ ಬಗ್ಗೆ ಮಾತನಾಡಿದರು.
ಶಾಸಕರ ಬೆಂಬಲಿಗರ ದೌರ್ಜನ್ಯ ಮಿತಿ ಮೀರಿದರೇ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.1ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿ ಹಲ್ಲೆಮಾಡಿದ ಆರೋಪಿಗಳನ್ನು ಬಂಧಿಸುವಂತೆ ಠಾಣೆಗೆ ಮುತ್ತಿಗೆ ಹಾಕಿ ಶಾಸಕರು ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಪಕ್ಷಭೇದ ಮಾಡದೆ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಡಿವೈಎಸ್ಪಿ ಬಾಲರಾಮೇಗೌಡ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.