ರಾಸ್ತಾ ಲೈಫ್ ಸ್ಟೆ ೈಲ್ನಲ್ಲಿ ಅಕ್ರಮ ಆರೋಪ
ಕ.ಪ್ರ.ವಾರ್ತೆ, ರಾಮನಗರ, ನ.27
ನಗರದ ಹೊರ ವಲಯದಲ್ಲಿರುವ ರಾಸ್ತಾ ಲೈಫ್ ಸ್ಟೈಲ್ ಕೇಂದ್ರದಲ್ಲಿ ಅಕ್ರಮಗಳ ಬಗ್ಗೆ ಕೇಳಿ ಬಂದಿರುವ ದೂರಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ವಲಯ ಐಜಿಪಿ ಅಮರ್ ಕುಮಾರ್ ಪಾಂಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಾರ್ಷಿಕ ಪರಿಶೀಲನೆ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಸ್ತಾ ಲೈಫ್ ಸ್ಟೈಲ್ ಕೇಂದ್ರದಲ್ಲಿ ಹುಕ್ಕಾ ಸೇವನೆ ಸಹಿತ ನಾನಾ ಅಕ್ರಮಗಳ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಶಹಬ್ಬಾಷ್ ಗಿರಿ: ಸಿಬ್ಬಂದಿ ಕೊರತೆ ನಡುವೆಯೂ ರಾಮನಗರ ಜಿಲ್ಲಾ ಪೊಲೀಸ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವುದು ಅಂಕಿ-ಅಂಶಗಳ ನೋಟದಿಂದ ತಿಳಿದು ಬಂದಿದೆ. ಇಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳು ಇಳಿಮುಖವಾಗಿವೆ ಎಂದು ಪಾಂಡೆ ಶಹಬ್ಬಾಷ್ ಗಿರಿ ನೀಡಿದರು.
ಕೊಲೆ, ದೊಂಬಿ, ಗ್ರಾಮಗಳಲ್ಲಿ ಗಲಾಟೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ವಿಷಯದಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮದ ಪರಿಣಾಮ ಇದು ಸಾಧ್ಯವಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಅಪರಾಧ ಪ್ರಕರಣಗಳು ಮಾತ್ರವಲ್ಲದೆ ಅಪಘಾತಗಳ ಸಂಖ್ಯೆಯು ಕಳೆದ ವರ್ಷಕ್ಕಿಂತ ತಗ್ಗಿದೆ. ಪ್ರವಾಸಿ ತಾಣಗಳಲ್ಲಿ ಸಾವು-ನೋವು, ಆತ್ಮಹತ್ಯೆ ಜರುಗದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮ ತೃಪ್ತಿದಾಯಕವಾಗಿದೆ ಎಂದರು.
ಸರ್ಕಾರಕ್ಕೆ ಪ್ರಸ್ತಾವನೆ: ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ನೇಮಕಾತಿ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ನಿರ್ವಹಿಸಿದರೆ ಸಿಬ್ಬಂದಿ ಕೊರತೆ ಎದ್ದು ಕಾಣದು ಎಂದು ಪಾಂಡೆ ತಿಳಿಸಿದರು.
ಕೇಂದ್ರ ವಲಯದಲ್ಲಿ ಪೋಲಿಸರಿಂದ ಗ್ರಾಮ ವಾಸ್ತವ್ಯ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ನಾಗರಿಕರ ವಿಶ್ವಾಸಗಳಿಸಿ ಮತ್ತಷ್ಟು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಪೊಲೀಸರಿಗೆ ಎಚ್ಚರಿಕೆ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಪೊಲೀಸರಿಗೆ ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಇದನ್ನು ಮನಗಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತಹ ಕೃತ್ಯದಲ್ಲಿ ಭಾಗಿಯಾಗುತ್ತಿಲ್ಲ ಎಂದು ಅವರು ತಿಳಿಸಿದರು.
ಬ್ಯಾಂಕ್ ಅಧಿಕಾರಿಗಳ ಸಭೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬ್ಯಾಂಕ್ ಉನ್ನತ ಅಧಿಕಾರಿಗಳ ಸಭೆ ಆಯೋಜಿಸಿ ರಾಮನಗರ ಜಿಲ್ಲೆ ವ್ಯಾಪ್ತಿಯ ಎಟಿಎಂ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು ಎಂದು ಎಸ್ಪಿ ಅನುಪಮ್ ಅಗ್ರವಾಲ್ ಹೇಳಿದರು. ಗೋಷ್ಠಿಯಲ್ಲಿ ಎಎಸ್ಪಿ ಕುಲದೀಪ್, ಡಿವೈಎಸ್ಪಿ ರಾಮಲಿಂಗಪ್ಪ ಹಾಜರಿದ್ದರು.