ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತ ಆತ್ಮಹತ್ಯೆ; ಸರ್ಕಾರದ ವಿರುದ್ಧ ಆಕ್ರೋಶ

Mainashree
Updated On : 27 Nov 2013, 11:32 am

ಚನ್ನಪಟ್ಟಣ: ಬೆಳಗಾವಿ ಸುವರ್ಣ ಸೌಧದ ಮುಂಭಾಗ ನಡೆದ ರೈತ ಆತ್ಮಹತ್ಯೆ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಮಾಡುವಂತೆ ಹಲವಾರು ಬಾರಿ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆಯಾದರೂ, ಕಾರ್ಖಾನೆಗಳ ಕಪಿಮುಷ್ಟಿಗೆ ಸಿಲುಕಿರುವ ಸರ್ಕಾರ ಕಬ್ಬಿಗೆ ಇಂದಿಗೂ ಬೆಲೆ ನಿಗದಿಪಡಿಸದ ಮೂಲಕ ರೈತ ವಿರೋಧಿ ಧೋರಣೆಯನ್ನು ಎತ್ತಿಹಿಡಿದಿದ್ದು, ಇಂತಹ ಸರ್ಕಾರ ಅಧಿಕಾರದಲ್ಲಿರಲು ಅರ್ಹವಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಕಬ್ಬಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಬೆಲೆ ನಿಗದಿ ಮಾಡಿದ್ದರೆ ಇಂದು ರೈತ ಸಾವಿಗೀಡಾಗ ಬೇಕಾದ ದುಸ್ಥಿತಿ ನಿರ್ಮಾಣ ವಾಗುತ್ತಿರಲಿಲ್ಲ, ಬೆಳಗಾವಿಯಲ್ಲಿ ರೈತ ವಿಠಲ್ ಅರಭಾವಿ ಸಾವು ಆತ್ಮಹತ್ಯೆಯಲ್ಲ ಸರ್ಕಾರ ಮಾಡಿರುವ ಕಗ್ಗೊಲೆ ಎಂದು ಕಿಡಿಕಾರಿದ ಅವರು ಸರ್ಕಾರ ಈ ಕೂಡಲೇ ಮೃತ ರೈತನ ಕುಟುಂಬಕ್ಕೆ ಸೂಕ್ತ ಸೌಲಭ್ಯ ನೀಡುವ ಮೂಲಕ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಈ ರೈತನ ಕಬ್ಬಿನ ಹಣವನ್ನು ಯಾವ ಕಾರ್ಖಾನೆ ಮಾಲೀಕರು ಕಸಿದುಕೊಂಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರ ಕೈಗೆ ಕೋಳ ತೊಡಿಸುವ ಕೆಲಸ ನಡೆಯಬೇಕಿದೆ ಎಂದು ಆಗ್ರಹಿಸಿದ  ಅವರು, ಸರ್ಕಾರ ಇನ್ನಾದರೂ ರೈತಪರ ಆಲೋಚನೆ ಮಾಡದಿದ್ದಲ್ಲಿ ರೈತರ ಆಕ್ರೋಶ ಎದುರಿಸ ಬೇಕಾಗುತ್ತದೆ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ವಿಭಾಗೀಯ ಉಪಾಧ್ಯಕ್ಷ ಎಂ. ರಾಮು, ಜಿಲ್ಲಾಧ್ಯಕ್ಷ ಕೆ. ಮಲ್ಲಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಪ್ರೊ. ಕೆ. ಮಲ್ಲಯ್ಯ, ಕನ್ನಡ ಪರ ಚಳವಳಿಗಾರ ಸಿಂ.ಲಿಂ. ನಾಗರಾಜು, ನವ ಕರ್ನಾಟಕ ಯುವಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ಕೆನಲಿಗೌಡ, ಜನಪರ ವೇದಿಕೆಯ ಮಂಗಳಮ್ಮ, ಲಕ್ಷ್ಮೀ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement