ವಿಪತ್ತು ಪರಿಹಾರ ನಿಧಿಯಿಂದ ವೈಜ್ಞಾನಿಕ ಪರಿಹಾರ ನೀಡಿ
ಕ.ಪ್ರ.ವಾರ್ತೆ ರಾಮನಗರ ನ.27
ನೈಸರ್ಗಿಕ ಆಪತ್ತಿನಿಂದ ಒಣಗಿರುವ ತೆಂಗು, ಮಾವು ಇತ್ಯಾದಿ ಮರಗಳು, ಬತ್ತಿ ಹೋಗಿರುವ ಸಹಸ್ರಾರು ಕೊಳವೆ ಬಾವಿಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ವೈಜ್ಞಾನಿಕ ಪರಿಹಾರ ನೀಡುವ ಮೂಲಕ ರೈತರಿಗೆ ಆಗಿರುವ ನಷ್ಟವನ್ನು ಭರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದ ಪ್ರತಿಭಟನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಯಲುಸೀಮೆ ಪ್ರದೇಶದ ರಾಮನಗರ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕೆರೆ-ಕಟ್ಟೆಗಳನ್ನು ತುಂಬಿಸಲು ಸಾಧ್ಯವಾಗಬಲ್ಲ ಸಮಗ್ರ ಮತ್ತು ಶಾಶ್ವತ ನೀರಾವರಿ ಯೋಜನೆಯನ್ನು ಅತ್ಯಂತ ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಾಂಪ್ರದಾಯಿಕ ನೀರು ಪೂರೈಸಿ: ಬಯಲುಸೀಮೆಯ 6 ಜಿಲ್ಲೆಗಳು ನಿರಂತರ ಬರದ ಬವಣೆಗೆ ಸಿಲುಕಿರುವ ಪರಿಣಾಮ ಮನುಷ್ಯರು, ಪ್ರಾಣಿ, ಪಕ್ಷಿ, ಸಸ್ಯ ಸಂಕುಲಕ್ಕೆ ನೀರಿನ ಅಭಾವ ತಲೆದೋರಿದೆ. ಪರಿಸರ, ಭೂಗರ್ಭ, ಅರಣ್ಯ, ಕೃಷಿ ಬದುಕು, ವೃಕ್ಷ ಸಂಪತ್ತು ಅಸುರಕ್ಷತೆ ಮತ್ತು ಅಸ್ಥಿರತೆಗೆ ಗುರಿಯಾಗಿದೆ. ನೆಲ-ಜಲ ಹಾಗೂ ಜನ ಜೀವನದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ಅಧ್ಯಯನ ನಡೆಸಿ ಸುರಕ್ಷತೆ ಮತ್ತು ಸುಸ್ಥಿರತೆಗಾಗಿ ಸಾಂಪ್ರದಾಯಿಕ ನೀರಿನ ಪೂರೈಸಬೇಕೆಂದು ಆಗ್ರಹಿಸಲಾಯಿತು.
ನ್ಯಾಯಾಲಯಗಳಿಗೆ ಮನವಿ: ಜಲಾಶಯ, ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಕೋಟ್ಯಂತರ ಗಿಡ-ಮರಗಳು ಒಣಗಿವೆ. ಸಹಸ್ರಾರು ಕೊಳವೆ ಬಾವಿಗಳು ಬತ್ತಿವೆ. ಇದೆಲ್ಲದರ ಪರಿಣಾಮ ಜಿಲ್ಲೆಯಲ್ಲಿ ರು.4 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ನೀರಿಲ್ಲದೆ ಬದುಕು ಸಂಕಷ್ಟ, ಗಂಡಾಂತರಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಬರದ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಸರ್ಕಾರಕ್ಕೆ ಸೂಚಿಸುವ ಮೂಲಕ ಈ ಜನರ ಬದುಕು ಹಸನಾಗಿಸಬೇಕೆಂದು ನ್ಯಾಯಾಲಯಗಳನ್ನು ಮನವಿ ಮಾಡಲಾಯಿತು.
ಕರ್ತವ್ಯ ಪ್ರಜ್ಞೆ ಮೆರೆಯಲು ಆಗ್ರಹ: ರಾಮನಗರ ಜಿಲ್ಲೆಯ ಎಲ್ಲ ಮಾಜಿ ಮತ್ತು ಹಾಲಿ ಸಂಸದರು, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಜಿಲ್ಲೆಗೆ ನೀರು ಹರಿಸುವುದನ್ನು ತಮ್ಮ ಜವಾಬ್ದಾರಿ ಎಂದು ಭಾವಿಸಿ ಕರ್ತವ್ಯಪ್ರಜ್ಞೆ ಮೆರೆಯಬೇಕು. ಈ ಜಿಲ್ಲೆಯಲ್ಲಿ ಒಂದು ಕಾಲಕ್ಕೆ ಜೀವ ಸೆಲೆಯಾಗಿದ್ದ ಕಣ್ಣ ಮತ್ತು ಅರ್ಕಾವತಿ ನದಿಗಳು, ಎಲ್ಲ ಕೆರೆ-ಕಟ್ಟೆಗಳ ಪುನಶ್ಚೇತನಕ್ಕೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ಕಾವೇರಿ-ಹೇಮೆ ಹರಿಸಿ: ಈ ಜಿಲ್ಲಾದ್ಯಂತ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚುತ್ತಲೇ ಇದೆ. ಕನ್ನಂಬಾಡಿ, ಹೇಮಾವತಿ ನದಿ ನೀರನ್ನು ಇಲ್ಲಿಗೆ ಹರಿಸಬೇಕು. ಕಾವೇರಿ-ಅರ್ಕಾವತಿ-ಸಂಗಮ, ಇಗ್ಗಲೂರು ಜಲಾಶಯದಿಂದ ನೀರು ಹರಿಸುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖ ಆಗಬೇಕು ಎಂದು ಸಭೆ ಹಕ್ಕೊತ್ತಾಯ ಮಂಡಿಸಿತು.
ತುರ್ತು ಸಭೆಗೆ ಆಗ್ರಹ: ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಬರದ ಬವಣೆಗೆ ಗುರಿಯಾದ ಚನ್ನಪಟ್ಟಣ ತಾಲೂಕನ್ನು ಬರಪೀಡಿತವೆಂದು ಘೋಷಿಸದೆ ತಾರತಮ್ಯ ಎಸಗಲಾಗಿದೆ. ತಕ್ಷಣವೇ ಚನ್ನಪಟ್ಟಣವನ್ನೂ ಬರಪೀಡಿತ ತಾಲೂಕೆಂದು ಘೋಷಿಸಿ, ಪರಿಹಾರ ಕಾಮಗಾರಿ ಪ್ರಾರಂಭಿಸಬೇಕು. ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧ ತುರ್ತು ಸಭೆ ಕರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಆಗ್ರಹಿಸಲಾಯಿತು.
ನದಿಗಳ ಜಲ ಸಂಪತ್ತಿನ ಪ್ರಮಾಣ
ರಾಜ್ಯದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ 16 ನದಿಗಳಿಂದ ಲಭ್ಯವಿರುವ ವಾರ್ಷಿಕ ಜಲ ಸಂಪತ್ತಿನ ಒಟ್ಟಾರೆ ಪ್ರಮಾಣ 2448.19 ಟಿಎಂಸಿ ಆಗಿದೆ. ಇದರಲ್ಲಿ ಶೇಕಡ 8.55ರಷ್ಟು ಅಂದರೆ 209.49 ಟಿಎಂಸಿ ನೀರು ಹರಿಸಿದರೂ ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ನೀಗಲಿದೆ ಎನ್ನುವುದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಭಿಪ್ರಾಯವಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಿಗೆ ಎದ್ದಿರುವ ಹಾಹಾಕಾರ ನಿವಾರಿಸಲು ಪರಮಶಿವಯ್ಯ ವರದಿಯನ್ವಯ ಶಾಶ್ವತ ನೀರಾವರಿ ಯೋಜನೆ ಜಾರಿ ಒಂದೇ ಮಾರ್ಗ. ಯೋಜನೆ ಅನುಷ್ಠಾನಗೊಳ್ಳದಿದ್ದರೆ ಈ ಭಾಗದಲ್ಲಿ ಮರುಭೂಮಿಗಿಂತಲೂ ಭೀಕರವಾದ ಜಲಕ್ಷಾಮ ತಲೆದೋರುತ್ತದೆ ಎನ್ನುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಲಾಯಿತು.