ಸರ್ವೆಯರ್, ಪೊಲೀಸ್ ಪೇದೆ ಲೋಕಾ ಬಲೆಗೆ
ಬೆಂಗಳೂರು: ಜಮೀನಿನ ಪೋಡಿ ಸ್ಕೆಚ್ ನೀಡಲು 5 ಸಾವಿರ ಲಂಚ ಪಡೆದ ಆನೇಕಲ್ ತಾಲೂಕು ಕಚೇರಿ ಸರ್ವೇಯರ್ ಕೆ.ಬಿ.ರವಿ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆನೇಕಲ್ ಗ್ರಾಮದ ಸರ್ವೆ ನಂಬರ್ 303ರಲ್ಲಿ ಕೆ.ಮಂಜುನಾಥ ಎಂಬುವರಿಗೆ ಸೇರಿದ ಜಮೀನಿದ್ದು ತತ್ಕಾಲ್ ಪೋಡಿ ಸ್ಕೆಚ್ ನೀಡಲು ಕೆ.ಬಿ.ರವಿ 8 ಸಾವಿರ ಲಂಚ ಕೇಳಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮಂಜುನಾಥ ಅವರಿಂದ 5 ಸಾವಿರ ಲಂಚ ಸ್ವೀಕರಿಸುವಾಗ ರವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೇದೆ ಬಲೆಗೆ: ಅಪರಾಧ ಪ್ರಕರಣವೊಂದರಲ್ಲಿ ದೋಷಾರೋಪ ಪಟ್ಟಿಯಿಂದ ವ್ಯಕ್ತಿ ಕೈ ಬಿಡಲು 10 ಸಾವಿರ ಲಂಚ ಪಡೆದ ಮಡಿವಾಳ ಠಾಣೆ ಪೇದೆ ಗಂಗರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಾಗೇಂದ್ರ ವಿಶ್ವಕರ್ಮ ಹಾಗೂ ಸಂಬಂಧಿಗಳನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯಲ್ಲಿ ಸೇರಿಸದೆ ಇರಲು ಮಡಿವಾಳ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ, ಪೇದೆ ಗಂಗರಾಜು ಹಾಗೂ ಪಿಎಸ್ಐ ಬಸವರಾಜು 30 ಸಾವಿರ ಲಂಚ ಕೇಳಿದ್ದಾರೆಂದು ಆರೋಪಿಸಿ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ.26ರಂದು ಮಡಿವಾಳ ಪೊಲೀಸ್ ಠಾಣೆಯಲ್ಲೇ ಪೇದೆ ಗಂಗರಾಜು ನಾಗೇಂದ್ರ ಅವರಿಂದ ರು. 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.