ಸುದ್ದಿ ಸಂಕ್ಷೇಪ
'ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ'
ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕಲಿಯುವಂತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬ ಪೋಷಕರು ಹೆಚ್ಚಿನ ಒತ್ತು ನೀಡಿ ಸಮಾಜ ಸುಧಾರಣಿಗೆ ಮುಂದಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪ್ರಸಾದ್ ಹೇಳಿದ್ದಾರೆ. ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಗೆ ಹಾಗೂ ವಯಸ್ಸಾದವರಿಗೆ ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು. ಅತ್ತಿಬೆಲೆ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ಕಂಬಳಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ 20 ಜನ ವಯಸ್ಸಾದವರಿಗೆ ಮಾಸಾಶನ ಪತ್ರಗಳನ್ನು ವಿತರಣೆ ಮಾಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಕೇಶವ ಸೇರಿದಂತೆ ಗ್ರಾಮದ ಮುಖಂಡರು, ಮುಖ್ಯ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.
ಸಿಂಧ್ಯಾರಿಂದ ವಿಶೇಷ ಪೂಜೆ
ಕನಕಪುರ: ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಅರುಣಾಚಲೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಾರಂಭದಲ್ಲಿ ರಾಜ್ಯ ಜೆಡಿಎಸ್ ಮುಖಂಡ ಪಿಜಿಆರ್ ಸಿಂಧ್ಯಾ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಶಾಸಕ ಕೆ.ರಾಜು, ತಾಪಂ ಸದಸ್ಯ ಪುರುಷೋತ್ತಮ್, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಮುಖಂಡರುಗಳಾದ ಬಿ.ಎಸ್.ಗೌಡ, ಚಂದ್ರು, ವಿಶಾಲಾಕ್ಷ, ಸಿದ್ಧಮರಿಗೌಡ, ತುಂಗಣಿ ಪುಟ್ಟಸ್ವಾಮಿ, ಸೋಮಶೇಖರ್, ಬೈರೇಗೌಡ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ದೇವಾಲಯದ ಪ್ರಾಂಗಣದ ಮಂಟಪಗಳಲ್ಲಿ ಐದು ಈಶ್ವರ ಪ್ರತಿಮೆಗಳ ಪ್ರತಿಷ್ಠಾಪನೆ ನಡೆಯಿತು.