ಆಹ್ವಾನ ಪತ್ರಿಕೆಯಲ್ಲಿ ಯೋಗೇಶ್ವರ್; ಆಕ್ಷೇಪ
ಚನ್ನಪಟ್ಟಣ: ಯೋಗೇಶ್ವರ್ ವಿರೋಧದ ನಡುವೆಯೂ ಕಾಂಗ್ರೆಸ್ ಮತ್ತೆ ಸಂಸದ ಎರಡನೇ ಸುತ್ತಿನ ಗ್ರಾಮ ಸಂದರ್ಶನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಫೋಟೋವನ್ನು ಮತ್ತೆ ಪ್ರಕಟಿಸಿದ್ದು ಇದಕ್ಕೆ ಶಾಸಕರ ಕಾರ್ಯಾಲಯ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ.
ತನ್ನ ನೆಲೆಯನ್ನು ರಾಜ್ಯದಲ್ಲಿ ವಿಸ್ತರಿಸಿಕೊಳ್ಳಲು ಸಮಾಜವಾದಿ ಪಕ್ಷ ಶ್ರಮಿಸುತ್ತಿದ್ದು ಇಂತಹ ವೇಳೆಯಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಯೋಗೇಶ್ವರ್ ಆಪ್ತ ಸಹಾಯಕ ತಿಮ್ಮೇಶ್ ಪ್ರಭು ತಿಳಿಸಿದ್ದಾರೆ.
ನಮ್ಮ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಜತೆಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿರುವ ಅವರು, ಲೋಕಸಭಾ ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಕಾಂಗ್ರೆಸ್ಗೆ ವಿಷಯಾಧಾರಿತ ಬೆಂಬಲ ನೀಡಿತ್ತೇ ವಿನಾ ಯಾವುದೇ ಶಾಶ್ವತ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಏಕೈಕ ಶಾಸಕರಿರುವ ಈ ಕ್ಷೇತ್ರದಲ್ಲಿ ಇಲ್ಲಸಲ್ಲದ ಗೊಂದಲ ಮೂಡಿಸುತ್ತಿರುವ ಕಾಂಗ್ರೆಸ್, ಶಾಸಕರನ್ನು ತಮ್ಮ ಪಕ್ಷದ ಮುಖಂಡರೆಂಬಂತೆ ಬಿಂಬಿಸ ಹೊರಟಿದೆ ಎಂದಿರುವ ಅವರು ಇನ್ನು ಮುಂದಾದರೂ ಕೇವಲ ಕಾಂಗ್ರೆಸ್ ಮುಖಂಡರು ಮತ್ತವರ ಪಕ್ಷದ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ನಡೆಸಬೇಕು ಎಂದಿದ್ದಾರೆ.