ಜನರ ಆಕ್ರೋಶಕ್ಕೆ ಆಟೋ ಭಸ್ಮ
ಕ.ಪ್ರ.ವಾರ್ತೆ ರಾಮನಗರ ನ. 28
ಗೂಡ್ಸ್ ಆಟೋ ಡಿಕ್ಕಿಯೊಡೆದ ಪರಿಣಾಮ, ಬೈಕ್ ಸವಾರನೊಬ್ಬ ಮೃತಪಟ್ಟು, ಮಹಿಳೆ ಗಾಯಗೊಂಡ ಘಟನೆ ನಗರದ ಎಪಿಎಂಸಿ ಬಳಿ ಗುರುವಾರ ಸಂಭವಿಸಿದೆ. ಉದ್ರಿಕ್ತ ಗುಂಪು ಅಪಘಾತಕ್ಕೆ ಕಾರಣವಾದ ಆಟೋಗೆ ಬೆಂಕಿ ಹಚ್ಚಿ, ಸ್ಥಳಕ್ಕೆ ತಡವಾಗಿ ಬಂದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬಸ್ಗಳಿಗೆ ಕಲ್ಲು ತೂರಿತು. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕನಕಪುರ ತಾಲೂಕಿನ ಕೊಟ್ಟಗಾಳು ಗ್ರಾಮದ ನಾಗರಾಜು ಅಲಿಯಾಸ್ ನಾಗ(45) ಮೃತ ವ್ಯಕ್ತಿ.
ಬೈಕ್ ಹಿಂಬದಿ ಕುಳಿತ್ತಿದ್ದ ಮಹದೇವಮ್ಮ(65) ತೀವ್ರ ಗಾಯಗೊಂಡಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಉದ್ರಿಕ್ತರು ನಡೆಸಿದ ಕಲ್ಲು ತೂರಾಟ, ಪೊಲೀಸ್ ಲಾಠಿ ಪ್ರಹಾರದಿಂದ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಉದ್ರಿಕ್ತರ ಅಟ್ಟಹಾಸ: ಬೆಂಗಳೂರು-ಮೈಸೂರು ಚತುಷ್ಪಥ ಹೆದ್ದಾರಿಗೆ ಹೊಂದಿಕೊಂಡ ಸೇವಾ ರಸ್ತೆಯಲ್ಲಿ ನಾಗರಾಜು ತನ್ನ ಅತ್ತೆ ಮಹದೇವಮ್ಮ ಅವರನ್ನು ಕೂರಿಸಿಕೊಂಡು ಬೈಕಿನಲ್ಲಿ ಚನ್ನಪಟ್ಟಣ ಕಡೆ ತೆರಳುತ್ತಿದ್ದರು. ಎದುರು ಬಂದ ಗೂಡ್ಸ್ ಆಟೋ ಬೈಕಿಗೆ ಡಿಕ್ಕಿಯಾಗಿದೆ. ಡಿಕ್ಕಿ ನಂತರ ಆಟೋ ಬೈಕ್ ಸವಾರರ ಮೇಲೆ ಮಗುಚಿತು. ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹದೇವಮ್ಮ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಸುದ್ದಿಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮುಟ್ಟಿಸಿದರು.
ಎಸ್ಐ ಮೇಲೆ ಹಲ್ಲೆ: ಸುಮಾರು ಅರ್ಧ ತಾಸು ಕಳೆದರೂ ಪೊಲೀಸರ ಆಗಮನವಾಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಅಪಘಾತಕ್ಕೆ ಕಾರಣವಾದ ಆಟೋಗೆ ಬೆಂಕಿ ಹಚ್ಚಿದರು. ಆಟೋ ಭಾಗಶಃ ಸುಟ್ಟು ಹೋಯಿತು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಮೋಹನರೆಡ್ಡಿ ಮೇಲೆ ಉದ್ರಿಕ್ತರು ಹಲ್ಲೆ ನಡೆಸಿದರು.
ವಾಹನ ಸಂಚಾರಕ್ಕೆ ಅಡ್ಡಿ: ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಿ, ರಾಜ್ಯ ಸಾರಿಗೆ ಬಸ್ಸುಗಳ ಮೇಲೂ ಕಲ್ಲು ತೂರಿದರು. ಒಂದು ಬಸ್ಸಿನ ಸಂಪೂರ್ಣ ಗಾಜುಗಳು ಪುಡಿಯಾಗಿದ್ದು, ಬಸ್ ಜಖಂಗೊಂಡಿದೆ. ಅದಕ್ಕೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಪ್ರಯತ್ನಿಸಿದರು. ಅದೃಷ್ಟವಶಾತ್ ಆ ಪ್ರಯತ್ನ ವಿಫಲಗೊಂಡಿತು. ಕಲ್ಲು ತೂರಾಟದಿಂದ ಇನ್ನೆರಡು ಬಸ್ಸುಗಳ ಕೆಲ ಗಾಜುಗಳು ಪುಡಿಯಾಗಿವೆ.
ಲಾಠಿ ಪ್ರಹಾರ: ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಸಂಚಾರಿ ಪೊಲೀಸರು ಸ್ಥಳಕ್ಕೆ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಸಿಬ್ಬಂದಿ ಕರೆಸಿಕೊಂಡರು. ಎರಡು ಬಸ್ಸುಗಳಲ್ಲಿ ಬಂದ ಮೀಸಲು ಪಡೆ ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದರು. ಈ ಹಂತದಲ್ಲಿ ಉದ್ರಿಕ್ತ ಗುಂಪು ಕಲ್ಲು ತೂರಲಾರಂಭಿಸಿದಾಗ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ತಹಬದಿಗೆ: ಕಲ್ಲು ತೂರಾಟವನ್ನೂ ಲೆಕ್ಕಿಸದೆ ಲಾಠಿ ಪ್ರಹಾರ ಮುಂದುವರೆಸಿದ ಪೊಲೀಸರು ಗುಂಪನ್ನು ಚದುರಿಸಿ, ಪರಿಸ್ಥಿತಿಯನ್ನು ತಹಬದಿಗೆ ತಂದರು. ನಂತರ ಮೃತ ನಾಗರಾಜು ಶವವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಘಟನೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂದು ತಾಸು ಅಸ್ತವ್ಯಸ್ತಗೊಂಡಿತ್ತು. ಬಳಿಕ ಸಂಚಾರ ವ್ಯವಸ್ಥೆ ಸುಗಮವಾಯಿತು. ನಾಗರಾಜು ಶವವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯುತ್ತಿದ್ದಂತೆಯೇ ಅಲ್ಲೂ ಜಮಾಯಿಸಿದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಗುಂಪನ್ನು ಚದುರಿಸಿದರು. ಅಪಘಾತ ಸ್ಥಳ ಮತ್ತು ಆಸ್ಪತ್ರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಭೇಟಿ ನೀಡಿದ್ದರು.
ಐವರ ಬಂಧನ
ಆಟೋಗೆ ಬೆಂಕಿ ಹಚ್ಚಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಸ್ಸುಗಳ ಮೇಲೆ ಕಲ್ಲು ತೂರಿ ಅಪಘಾತ ಸ್ಥಳದಲ್ಲಿ ಅಹಿತಕರ ಘಟನೆಗೆ ಕಾರಣವಾದ ಆರೋಪದಡಿ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.