ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಗರಕೆರೆ ಒತ್ತುವರಿ ತೆರವು: ಭರವಸೆ

Mainashree
Updated On : 28 Nov 2013, 11:33 am

ದೊಡ್ಡಬಳ್ಳಾಪುರ: ನಾಗರಕೆರೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಪ್ರದೇಶವನ್ನು ಒತ್ತುವರಿದಾರರು ಎಂತಹ ಪ್ರಭಾವಿಗಳೇ ಆದರೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್ ಹೇಳಿದರು. ಇಲ್ಲಿನ ತಾಲೂಕು ಕಚೇರಿಗೆ ಗುರುವಾರ ಸಂಜೆ ಭೇಟಿ ನೀಡಿದ್ದ ಅವರು ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕಂದಾಯ ಇಲಾಖೆ ಈಗಾಗಲೇ ನಾಗರಕೆರೆ ಒತ್ತುವರಿ ಕುರಿತಂತೆ ಸರ್ವೇ ಕಾರ್ಯ ನಡೆಸಿದೆ. ಸುಮಾರು 12 ಎಕರೆಯಷ್ಟು ಒತ್ತುವರಿ ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಒತ್ತಡಗಳಿಗೂ ಮಣಿಯದೆ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು. ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮಾತನಾಡಿ ಕಳೆದ 15 ವರ್ಷಗಳ ಹಿಂದೆ ಸರ್ವೆ ನಡೆಸಿದ್ದ ವೇಳೆ ಸುಮಾರು 23 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿ ಎಂದು ಗುರುತಿಸಲಾಗಿತ್ತು. ಆದರೆ ಇತ್ತೀಚಿನ ಸರ್ವೇಯಲ್ಲಿ ಕೇವಲ 12 ಎಕರೆ ಒತ್ತುವರಿ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ವೆ ಪಾರದರ್ಶಕತೆ ಬಗ್ಗೆ ಅನುಮಾನಗಳಿವೆ. ಎರಡೂ ಸರ್ವೆಗಳ ವರದಿ ಪರಾಮರ್ಶಿಸಿ ಒತ್ತುವರಿ ಬಿಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಉಪ ವಿಭಾಗಾಧಿಕಾರಿ ಪ್ರತಿಕ್ರಿಯಿಸಿ ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ನಾಗರಕೆರೆ ಪ್ರದೇಶಕ್ಕೆ ಭೇಟಿ ನೀಡಿ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಸಿದ್ಧಲಿಂಗಯ್ಯ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement