ಮಗು ಸಾಕಲಾರದೆ ದತ್ತು ಕೇಂದ್ರಕ್ಕೆ ಕೊಟ್ಟ ದಂಪತಿ
ರಾಮನಗರ: ಬಡತನದ ಕಾರಣಕ್ಕೆ ದಂಪತಿ ಒಪ್ಪಿಸಿದ 25 ದಿನಗಳ ಹೆಣ್ಣು ಹಸುಗೂಸನ್ನು ವಶಕ್ಕೆ ತೆಗೆದುಕೊಂಡಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಗುವನ್ನು ಪೋಷಣೆಗಾಗಿ ಸೋಲೂರಿನ ಸ್ನೇಹಾಲಯ ಮಕ್ಕಳ ದತ್ತು ಕೇಂದ್ರಕ್ಕೆ ಹಸ್ತಾಂತರಿಸಿದೆ. ರಾಮನಗರದ ಗೀತಾಮಂದಿರ ಬಡಾವಣೆಯ ಬಡ ಕೂಲಿಕಾರರಾದ ಸುಶೀಲಮ್ಮ-ರವಿ ದಂಪತಿ ತಮ್ಮ 5ನೇ ಮಗುವನ್ನು ಸಾಕಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿ ಮಕ್ಕಳ ರಕ್ಷಣಾ ಘಟಕ್ಕೆ ಬುಧವಾರ ಒಪ್ಪಿಸಿದರು. ಮಗು ವಶಕ್ಕೆ ಪಡೆದ ಅಧಿಕಾರಿಗಳು ಪ್ರಕ್ರಿಯೆ ಪೂರ್ಣಗೊಳಿಸಿ, ದತ್ತು ಕೇಂದ್ರಕ್ಕೆ ನೀಡಿದ್ದಾರೆ. ದತ್ತು ಕೇಂದ್ರಕ್ಕೆ ಹಸ್ತಾಂತರಿಸುವುದಕ್ಕೂ ಮುನ್ನ ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಮಗು ಆರೋಗ್ಯವಾಗಿದೆ ಎಂದು ಮಕ್ಕಳ ತಜ್ಞರು ದೃಢಪಡಿಸಿದರು. ಶೀಘ್ರವೇ ಮಗುವನ್ನು ದತ್ತು ಪ್ರಕ್ರಿಯೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.