ಸಂಭಾಜಿ ಪಾಟೀಲ್ ಪ್ರತಿಕೃತಿ ದಹನ
ದೊಡ್ಡಬಳ್ಳಾಪುರ: ಕರ್ನಾಟಕ ಸರ್ಕಾರದ ಬಗ್ಗೆ ಉದ್ಧಟತನದ ಹೇಳಿಕೆ ಖಂಡಿಸಿ ಗುರುವಾರ ವಿವಿಧ ಕನ್ನಡಪರ ಸಂಘಟನೆಗಳು ಎಂಇಎಸ್ ಶಾಸಕ ಸಂಭಾಜೀ ಪಾಟೀಲ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದವು.
ಇಲ್ಲಿನ ಕೊಂಗಾಡಿಯಪ್ಪ ಬಸ್ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತದಲ್ಲಿ ಭುವನೇಶ್ವರಿ ಕನ್ನಡ ಸಂಘ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಕೃತಿ ದಹಿಸಿ ಮಾತನಾಡಿದ ಪ್ರತಿಭಟನಾಕಾರರು, ಬೆಳಗಾವಿ ಅಧಿವೇಶನದ ಆರಂಭದ ದಿನವೇ ಮಹಾಮೇಳಾವ ಹಮ್ಮಿಕೊಂಡು ಕನ್ನಡಿಗರನ್ನು ಪ್ರಚೋದಿಸುವ ಕೆಲಸವನ್ನು ಎಂಇಎಸ್ ಮಾಡಿದೆ. ಜೊತೆಗೆ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡಿಗರು-ಸರ್ಕಾರದ ವಿರುದ್ಧ ಕೀಳು ಶಬ್ದಗಳನ್ನು ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಬ್ಬರು ಶಾಸಕರನ್ನು ವಜಾಮಾಡಿ: ರಾಜ್ಯದಲ್ಲಿ ಭಾಷೆ ಮತ್ತು ಗಡಿ ವೈಷಮ್ಯ ಬಿತ್ತುವ ವ್ಯವಸ್ಥಿತ ಪಿತೂರಿ ನಡೆಸುತ್ತಿರುವ ಎಂಇಎಸ್ ಶಾಸಕರನ್ನು ಸದನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬೆಂಗಳೂರಿಗೆ ಬಂದಾಗ ನಮ್ಮನ್ನು ತಡೆಯುವ ಶಕ್ತಿ ಕನ್ನಡ ಸಂಘಟನೆಗಳಿಗೆ ಇದೆಯೇ ಎಂದು ಸವಾಲು ಹಾಕಿರುವ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲಗೆ ಕನ್ನಡ ಸಂಘಟನೆಗಳ ಶಕ್ತಿ ಅರಿತು ಮಾಡನಾಡಲಿ ಎಂದು ಆಗ್ರಹಪಡಿಸಿದರು.
ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ.ನ.ಪ್ರಭುದೇವ್,ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಹತ್ತಾರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.