ಅಭಿವೃದ್ಧಿಗೆ ಸುವರ್ಣ ಗ್ರಾಮ ಯೋಜನೆ ಸಹಕಾರಿ: ಶಾಸಕ ಡಾ.ಶ್ರೀನಿವಾಸಮೂರ್ತಿ
ಮಾಗಡಿ: ಸೋಲೂರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸುವರ್ಣ ಗ್ರಾಮ ಯೋಜನೆ ಸಹಕಾರಿಯಾಗಿದೆ ಎಂದು ನೆಲಮಂಗಲ ಶಾಸಕ ಡಾ. ಶ್ರೀನಿವಾಸಮೂರ್ತಿ ತಿಳಿಸಿದರು. ತಾಲೂಕಿನ ಸೋಲೂರು ಗ್ರಾಮ ಪಂಚಾಯ್ತಿಯ ಬಳಿ ಸುವರ್ಣ ಗ್ರಾಮ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಸೋಲೂರು ಪಂಚಾಯ್ತಿ ವ್ಯಾಪ್ತಿಯ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗೆ ಮೊದಲ ಅದ್ಯತೆ ನೀಡಲಾಗುವುದು. ಸೋಲೂರು ವ್ಯಾಪ್ತಿಯಲ್ಲಿನ ಕಾಲೇಜು ಮಕ್ಕಳಿಗೆ, ಉನ್ನತ ಶಿಕ್ಷಣದ ಅನುಕೂಲ ಕಲ್ಪಿಸಲು ಸೋಲೂರು ಬಳಿ ಪದವಿ ಕಾಲೇಜು ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ಇಲ್ಲಿನ ಸರ್ಕಾರಿ ಅಸ್ಪತ್ರೆ, ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಲು ಚಿಂತಿಸಲಾಗಿದೆ.ಇಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಅಗತ್ಯ ಕ್ರಮ ವಹಿಸುತ್ತೇನೆ ಎಂದರು. ಲಕ್ಕೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎನ್. ಗಂಗರಾಜು ಮಾತನಾಡಿದರು. ಸೋಲೂರು ಗ್ರಾಪಂ ಅಧ್ಯಕ್ಷೆ ನಾಗರತ್ನ ನಾಗರಾಜು, ಮಾಜಿ ಅಧ್ಯಕ್ಷ ಕಾಮರಾಜು, ಮುಜಾಯಿದ್ ಪಾಷಾ, ಗೋಪಾಲ್, ಬಾಬು, ಸೋಲೂರು ಮೂರ್ತಿ, ಮೌಲನಾ, ರಾಜಯ್ಯ, ಶಂಕರಪ್ಪ, ಜಿಪಂ ಸದಸ್ಯ ರಂಗಸ್ವಾಮಿ, ಗುತ್ತಿಗೆದಾರ ಮೂರ್ತಿ ಇತರರು ಇದ್ದರು.