ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೀವಂತ ವ್ಯಕ್ತಿ ಹೆಸರಲ್ಲಿ ಮರಣ ಪ್ರಮಾಣ ಪತ್ರ

Rashmi Kasaragodu
Updated On : 30 Nov 2013, 12:41 pm

ಕ.ಪ್ರ.ವಾರ್ತೆ   ರಾಮನಗರ   ನ.29
ಈ ಜಿಲ್ಲೆಯಲ್ಲಿ ಧನದಾಹಿ ಕಂದಾಯ ಅಧಿಕಾರಿಗಳ ಆಟಾಟೋಪವೂ ಮಿತಿ ಮೀರಿದೆ. ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಅವರ ಜಮೀನನ್ನು ಅನ್ಯರಿಗೆ ಖಾತೆ ಮಾಡಿಕೊಟ್ಟಿರುವ ಪ್ರಕರಣ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ.  
ಚನ್ನಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಅಬ್ಬೂರುದೊಡ್ಡಿ ಗ್ರಾಮದ ಸಿದ್ದೇಗೌಡ (64) ಅವರಿನ್ನೂ ಬದುಕಿದ್ದಾರಾದರೂ ತಾಲೂಕು ಕಚೇರಿಯಿಂದ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಇದನ್ನಾಧರಿಸಿ ಸಿದ್ದೇಗೌಡ ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಅಬ್ಬೂರು ಸರ್ವೆ ನಂ.40-1ರಲ್ಲಿರುವ 30 ಗುಂಟೆ ಜಮೀನನ್ನು ಬೇರೆ ಕುಟುಂಬದವರಿಗೆ ಪೌತಿ ಖಾತೆ ಮಾಡಲಾಗಿದೆ.
ಈ ಪ್ರಕರಣದಲ್ಲಿ ಮರಣ ಪ್ರಮಾಣ ಪತ್ರ ನೀಡಿಕೆಯಷ್ಟೇ ಅಲ್ಲದೆ ಖಾತೆ ಬದಲಾವಣೆ ಪ್ರಕ್ರಿಯೆಯೂ ಕಾನೂನು ಬಾಹಿರವಾಗಿದೆ. ಮರಣ ಪ್ರಮಾಣ ಪತ್ರವೇನೋ ಗ್ರಾಮ ಲೆಕ್ಕಿಗನ ಮಟ್ಟದಲ್ಲೇ ಇತ್ಯರ್ಥ ಆಗುತ್ತದೆ. ಆದರೆ, ಪೌತಿ ಖಾತೆ ಬದಲಾವಣೆಯು ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕ ಮಾತ್ರವಲ್ಲದೆ ತಹಸೀಲ್ದಾರ್  ಜವಾಬ್ದಾರಿಯೂ ಹೌದು. ಈ ಲೋಪಕ್ಕೆ ಕಂದಾಯ ಇಲಾಖೆ ಹೊಣೆಯಾಗಿದೆ.
ಖಾತೆ ಬದಲಾವಣೆ ರಹಸ್ಯ: ಅಬ್ಬೂರುದೊಡ್ಡಿಯ ಸಿದ್ದೇಗೌಡ ಅವರು 2012ರ ಆ.11 ರಂದು ಮರಣ ಹೊಂದಿದ್ದಾರೆ ಎಂದು ಮೂರೇ ದಿನಕ್ಕೆ ಅಂದರೆ ಆ.14ಕ್ಕೆ ನೋಂದಣಿ ಮಾಡಿಸಲಾಗಿದೆ. ಆ.20ಕ್ಕೆ ಬೋಗಸ್ ಮರಣ ಪ್ರಮಾಣ ಪತ್ರ ವಿತರಣೆಯಾಗಿದೆ. ಮರಣ ಪ್ರಮಾಣ ಪತ್ರದೊಂದಿಗೆ ವೈಯಕ್ತಿಕ ಪತ್ರ ಸಲ್ಲಿಕೆ ಮೇರೆಗೆ 2013ರ ಜೂ.26ರಂದು ಮ್ಯುಟೇಷನ್ ರಿಜಿಸ್ಟರ್ ಸಂಖ್ಯೆ ಎಚ್-24 ಅನ್ವಯ ಪೌತಿ ಖಾತೆ ಆಗಿದೆ.
ಸಿದ್ದೇಗೌಡ ಅವರಿಗೆ ಪತ್ನಿ ಪುಟ್ಟಲಿಂಗಮ್ಮ ಹಾಗೂ ವನಜಾಕ್ಷಮ್ಮ, ಎಸ್.ಶಿವಣ್ಣ, ಎಸ್.ಜಯಕುಮಾರ್ ಈ ಮೂವರು ಮಕ್ಕಳಿದ್ದಾರೆ. ಆದರೆ, ಸಿದ್ದೇಗೌಡ ಅವರಿಗೆ ಸೇರಿದ 30 ಗುಂಟೆ ಜಮೀನಿನ ಪೌತಿ ಖಾತೆಯನ್ನು ಭದ್ರೇಗೌಡ ಎಂಬುವರ ಮಕ್ಕಳಾದ ಪುಟ್ಟಸ್ವಾಮಿ, ಎಂ.ವಿ.ವಿನೋದಕುಮಾರ್, ದೇವರಾಜು, ಚಿಕ್ಕೈದೇಗೌಡ, ಗೀತಾ ಅವರ ಹೆಸರಿಗೆ ಜಂಟಿ ಖಾತೆ ಇಡಲಾಗಿದೆ. ಇಲ್ಲಿ ಹಕ್ಕು ಬದಲಾವಣೆ ಪಡೆದವರ ಸಂಬಂಧವನ್ನೇ ಕಾಣಿಸಿಲ್ಲ.
ಗ್ರಾಮ ಲೆಕ್ಕಿಗನ ಕೈಚಳಕ: ಬದುಕಿರುವ ವ್ಯಕ್ತಿಯ ಹೆಸರಲ್ಲೇ ಮರಣ ಪ್ರಮಾಣ ಪತ್ರ ನೀಡಿಕೆ ಹಾಗೂ ಪೌತಿ ಖಾತೆ ಬದಲಾವಣೆಯ ಅಕ್ರಮದಲ್ಲಿ ಗ್ರಾಮ ಲೆಕ್ಕಿಗನದ್ದೇ ಪಾತ್ರ ಹೆಚ್ಚಿನದ್ದಾಗಿದೆ. ಇಂತಹ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಿಗನ ವರದಿ ಆಧರಿಸಿಯೇ ರಾಜಸ್ವ ನಿರೀಕ್ಷಕರು, ತಹಸೀಲ್ದಾರ್ ಸಹಿ ಮಾಡಿ ಕಡತ ವಿಲೇವಾರಿ ಮಾಡುತ್ತಾರೆ.
ಹೀಗಾಗಿ ಸಿದ್ದೇಗೌಡ ಅವರ ಮರಣ ಪ್ರಮಾಣ ಪತ್ರ ಮಂಜೂರಾತಿ, ಅವರಿಗೆ ಸೇರಿದ ಜಮೀನಿನ ಪೌತಿ ಖಾತೆಯಲ್ಲಿ ನಡೆದಿರುವ ಕೈಚಳಕ ಗ್ರಾಮ ಲೆಕ್ಕಿಗನದ್ದೇ ಆಗಿದೆ. ಭೂ ಕಬಳಿಕೆದಾರರ ಜತೆ ಶಾಮೀಲಾಗಿ ಮಾಡಿರುವ ಅಕ್ರಮ ಜಮೀನಿನ ಮೂಲ ವಾರಸುದಾರ ಸಿದ್ದೇಗೌಡ ಮತ್ತು ಕುಟುಂಬದ ಗಮನಕ್ಕೆ ಬಾರದಿರಲೆಂದು ಪಹಣಿಯಲ್ಲಿ ಯಾವುದೇ ಬದಲಾವಣೆ ಕಾಣಿಸುವ ಗೋಜಿಗೆ ಗ್ರಾಮ ಲೆಕ್ಕಿಗ ಹೋಗಿಲ್ಲ.
ಕ್ರಮ ಅನುಸರಿಸಿಲ್ಲ: ಮ್ಯುಟೇಷನ್ ನಮೂನೆ 12 ಅನ್ನು ಗ್ರಾಮದಲ್ಲಿ ಪ್ರಚುರಪಡಿಸಬೇಕಿದೆ. ಇದಾದ ನಂತರ ನಮೂನೆ 21 ಅನ್ನು ಆಸಕ್ತರಿಗೆ ಜಾರಿಗೊಳಿಸಿ, ಯಾರಿಂದಲೂ ಆಕ್ಷೇಪಣೆಗಳು ಬಾರದಿದ್ದಾಗಷ್ಟೇ ಖಾತೆ ಬದಲಾವಣೆ ಮಾಡಬೇಕು. ಹೀಗೆ ಮಾಡುವಾಗ ಕೋರ್ಟ್ ತಡೆಯಾಜ್ಞೆ, ಜಮೀನು ಪರಿಶಿಷ್ಟರಿಗೆ ಮಂಜೂರಾಗಿದ್ದೇ ಅಥವಾ ಇಲ್ಲವೇ, ನಿಯಮಗಳು ಮತ್ತು ಭೂ ಸುಧಾರಣಾ ಶಾಸನದ ಉಲ್ಲಂಘನೆ ಸಂಶಯ ಕುರಿತು ಪರಿಶೀಲಿಸಬೇಕು. ಈ ಯಾವ ಕ್ರಮವನ್ನೂ ಅಧಿಕಾರಿಗಳು ಅನುಸರಿಸಿಲ್ಲ.
ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಸಾವನ್ನಪ್ಪಿದಾಗ ಅವರ ಪಾಲಿನ ಜಮೀನು, ಮನೆ, ನಿವೇಶನ ವಗೈರೆ ಆಸ್ತಿಗಳನ್ನು ಮೃತನ ವಾರಸುದಾರರ ಪೈಕಿ ಒಬ್ಬರಿಗೆ ಇಲ್ಲವೇ ಜಂಟಿಯಾಗಿ ಖಾತೆ ಮಾಡಿಕೊಡಬೇಕು. ಹೀಗೆ ಮಾಡುವುದಕ್ಕೆ ಮೃತನ ಪತ್ನಿ, ಗಂಡು ಮತ್ತು ಹೆಣ್ಣು ಮಕ್ಕಳು, ವಯಸ್ಕರಾಗಿದ್ದರೆ ಮೊಮ್ಮಕ್ಕಳು ಲಿಖಿತ ಮನವಿಯಲ್ಲಿ ಒಪ್ಪಿಗೆ ಸೂಚಿಸಿ ಸಹಿ ಹಾಕಬೇಕೆನ್ನುವುದು ನಿಯಮ. ಇದ್ಯಾವುದನ್ನೂ ಪರಿಗಣಿಸಿಲ್ಲ ಎನ್ನುವುದನ್ನು ಗಮನಿಸಿದರೆ ಮರಣ ಪ್ರಮಾಣ ಪತ್ರ ನೀಡಿಕೆಯಲ್ಲೂ ಗ್ರಾಮ ಲೆಕ್ಕಿಗನ ಪಾತ್ರ ರುಜುವಾತಾಗಲಿದೆ.
ಸಿದ್ದೇಗೌಡ, ಪುತ್ರನಿಂದ ದೂರು: ತಾನಿನ್ನೂ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿದ್ದು, ಅದನ್ನು ಆಧರಿಸಿ ಅನ್ಯರಿಗೆ ತನ್ನ 30 ಗುಂಟೆ ಜಮೀನಿನ ಪೌತಿ ಖಾತೆ ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ಬೂರುದೊಡ್ಡಿಯ ಸಿದ್ದೇಗೌಡ, ಮತ್ತವರ ಮಗ ಎಸ್.ಶಿವಣ್ಣ ಅವರು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರನ್ನು ಭೇಟಿಯಾಗಿ ಲಿಖಿತ ದೂರು ದಾಖಲಿಸಿದ್ದಾರೆ.



ತನಿಖೆಗೆ ಆದೇಶಿಸಿದ ಡಿಸಿ
ಬದುಕಿರುವ ವ್ಯಕ್ತಿ ಹೆಸರಲ್ಲಿ ಮರಣ ಪ್ರಮಾಣ ಪತ್ರ ನೀಡಿಕೆ ಮತ್ತು ವಾರಸುದಾರರಲ್ಲದವರಿಗೆ ಪೌತಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement