ಪ್ರೌಢಶಾಲೆಯಲ್ಲಿ ಉಪನ್ಯಾಸ
ದೊಡ್ಡಬಳ್ಳಾಪುರ: ತೇಜಸ್ವಿ ಕನ್ನಡ ಓದುಗ ಜಗತ್ತಿಗೆ ಪಕ್ಷಿ-ಪ್ರಾಣಿ ಪ್ರಪಂಚದ ಒಳಹುಗಳನ್ನು ತೆರೆದಿಟ್ಟ ಮಹತ್ವದ ಲೇಖಕ ಎಂದು ಪತ್ರಕರ್ತ ಎನ್.ಎಂ.ನಟರಾಜ್ ಹೇಳಿದರು. ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತುಗಳ ಸಹಯೋಗದಲ್ಲಿ ಮಂಗಳವಾರ ನಡೆದ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ ಕಾರ್ಯಕ್ರಮ ಮಾಲಿಕೆಯ 2ನೇ ಕಾರ್ಯಕ್ರಮದಲ್ಲಿ ತೇಜಸ್ವಿ ಕೃತಿಗಳಲ್ಲಿ ಪರಿಸರ ಕುರಿತ ಕಳಕಳಿ ವಿಷಯದ ಬಗ್ಗೆ ಮಾತನಾಡಿದರು. ಪ್ರಕೃತಿ, ಪ್ರಾಣಿ, ಪಕ್ಷಿಗಳಿಲ್ಲದ ತೇಜಸ್ವಿ ಅವರ ಕೃತಿಗಳನ್ನು ಊಹಿಸುವುದೂ ಕಷ್ಟ. ಅಷ್ಟರ ಮಟ್ಟಿಗೆ ಪರಿಸರದ ಕಾಳಜಿ ಹೊಂದಿದ್ದ ಅವರು, ಕೈಗಾರಿಕೀಕರಣದ ಪ್ರಭಾವಕ್ಕೊಳಗಾದ ಮಲೆನಾಡಿನ ಆತಂಕಗಳನ್ನೂ ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡ ನಾಡಿನ ಅನೇಕ ಪಕ್ಷಿಗಳ ಬಗ್ಗೆ ಅವರ ಅಧ್ಯಯನ ಮತ್ತು ಬರೆಹಗಳು ಗಣನೀಯ ಎಂದರು.
ಗ್ರಾಪಂ ನೂತನ ಉಪಾಧ್ಯಕ್ಷ ಅಂಜನಮೂರ್ತಿ
ನೆಲಮಂಗಲ: ತಾಲೂಕಿನ ಅರಿಶಿನಕುಂಟೆ ಗ್ರಾಮ ಪಂಚಾಯ್ತಿಗೆ ನೂತನ ಉಪಾಧ್ಯಕ್ಷರಾಗಿ ವಾಜರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಅಂಜನಮೂರ್ತಿ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿದ್ದ ಕೆಂಪರಾಜು ರವರ ರಾಜೀನಾಮೆಯಿಂದ ತೆರವು ಆಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಂಚಾಯ್ತಿ ಅಧ್ಯಕ್ಷ ಟಿ.ರಾಜಣ್ಣ, ಮಾಜಿ ಅಧ್ಯಕ್ಷರುಗಳಾದ ತಿಮ್ಮರಾಯಪ್ಪ, ಶುಭಲಕ್ಷ್ಮೀಕಾಂತ್ ಇತರರು ಇದ್ದರು.