ಮಾಟ, ಮಂತ್ರ, ವಾಮಾಚಾರದ ವಿಷಯಕ್ಕೆ ಸಂಘರ್ಷ
ರಾಮನಗರ: ಮೂಢ ನಂಬಿಕೆ ಪರ ಮತ್ತು ವಿರುದ್ಧದ ವಿಷಯ ರಾಜ್ಯದೆಲ್ಲೆಡೆ ಬಿಸಿ ಚರ್ಚೆಗೆ ಗ್ರಾಸವಾಗಿವೆ. ಈ ನಡುವೆ ಮಾಗಡಿ ತಾಲೂಕಿನ ಕಳ್ಳಿಪಾಳ್ಯದಲ್ಲಿ ಮಾಟ, ಮಂತ್ರ, ವಾಮಾಚಾರದ ವಿಷಯ ಸಂಘರ್ಷಕ್ಕೆಡೆ ಮಾಡಿದೆ. ಪರಿಣಾಮ ಎರಡು ಗುಂಪು ಪೊಲೀಸರಿಗೆ ದೂರು ದಾಖಲಿಸಿ, ಪ್ರತಿಭಟನೆಗೆ ಇಳಿದಿದ್ದಾರೆ. 90 ಮನೆಗಳಿರುವ ಗ್ರಾಮದಲ್ಲಿರುವ ಶ್ರೀ ಭಕ್ತಮುನೇಶ್ವರ ಸ್ವಾಮಿ ನೆಲೆಸಿದ್ದು, ಅದು ಭಕ್ತರ ಇಷ್ಟಾರ್ಥ ಸಿದ್ಧಿಸುವ ದೈವವೆನ್ನುವ ಪ್ರತೀತಿ ಇದೆ. ಇಲ್ಲಿಗೆ ರಾಜ್ಯದ ನಾನಾ ಭಾಗಳಿಂದಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿರುವುದು ವಿಶೇಷ. ಇಂತಹ ಕಡೆ ದೇಗುಲದ ಆಚರಣೆಗಳೇ ಗ್ರಾಮಸ್ಥರ ಜಗಳಕ್ಕೆಡೆ ಮಾಡಿದೆ. ಗ್ರಾಮದ 20 ಮನೆಗಳ ಮುಂದೆ ಅರಳಿ ಎಲೆಯಲ್ಲಿ ಕುಟುಂಬ ಸದಸ್ಯರ ಹೆಸರು ಮತ್ತು ಹಾಳಾಗಿ ಹೋಗಲಿ ಎಂದು ಬರೆದು, ಅದಕ್ಕೆ ಹಂದಿಯ ರಕ್ತ ಲೇಪಿಸಿ ಅಂಟಿಸಿ ವಾಮಾಚಾರ ನಡೆಸಲಾಗಿದೆ. ಪವಿತ್ರವಾದ ದೇಗುಲ ಸನ್ನಿಧಿಯಲ್ಲಿ ಹಂದಿ ಕಾಲು, ತಲೆ, ರಕ್ತದಿಂದ ವಾಮಾಚಾರ ನಿಂತರವಾಗಿ ನಡೆಯುತ್ತಿದೆ ಎಂದು ಎಂದು ಒಂದು ಗುಂಪಿನವರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೆಲ್ಲವೂ ದೇಗುಲದ ಅಭಿವೃದ್ಧಿ ಮತ್ತು ಭಕ್ತರ ದಂಡು ಆಗಮನವನ್ನು ಸಹಿಸದ ಕಿಡಿಗೇಡಿಗಳ ಹುನ್ನಾರವಾಗಿದೆ. ಸ್ವತಃ ಅವರೇ ವಾಮಾಚಾರ ಮಾಡಿದ್ದು, ದೇಗುಲ ಮತ್ತು ಅರ್ಚಕರ ಮೇಲೆ ವಣಥಾ ಆರೋಪ ಹೊರಿಸುತ್ತಿದ್ದಾರೆ ಎಂದು ಮತ್ತೊಂದು ಗುಂಪು ಕುದೂರು ಪೊಲೀಸ್ ಠಾಣೆ ಎದುರು ಪ್ರತಿಭಟಿಸಿ ಪ್ರತ್ಯಾರೋಪ ಮಾಡಿದೆ.
ಹಂದಿ ರಕ್ತ ಬಳಕೆ ಏಕೆ: ಭಕ್ತ ಮುನೇಶ್ವರ ದೇಗುಲದಲ್ಲಿ ವಾಮಾಚಾರದ ಹಾವಳಿ ಹೆಚ್ಚಾಗಿದೆ. ಹಂದಿ ಬುರುಡೆ, ಕಾಲು, ರಕ್ತದಿಂದ ವಾಮಾಚಾರ ನಡೆಸಿದರೆ ವಿರೋಧಿಗಳಿಗೆ ಕೆಡುಕು ಉಂಟು ಮಾಡಬಹುದೆನ್ನುವ ಮೌಢ್ಯವಿದೆ. ಹೀಗೆ ಮಾಡುತ್ತಿರುವ ಪರಿಣಾಮ ಗ್ರಾಮಸ್ಥರಲ್ಲಿ ಭೀತಿ ಮೂಡಿದೆ ಎಂದು ಅರ್ಚಕರ ವಿರೋಧಿ ಗುಂಪು ಆರೋಪಿಸಿದೆ. ಅರ್ಚಕ ರಂಗಸ್ವಾಮಿ ಈ ಮೊದಲು ಸಾಮಾನ್ಯ ವ್ಯಕ್ತಿಯಾಗಿದ್ದರು. ಮೈಮೇಲೆ ದೇವರು ಆಹ್ವಾನವಾಗುತ್ತಾನೆ ಎಂದು ಭಕ್ತರನ್ನು ನಂಬಿಸಿ, ವಾಮಾಚಾರ ಮಾಡುತ್ತಾ ಶ್ರೀಮಂತ ಆಗಿದ್ದಾರೆ. ಪುಟ್ಟ ಗುಡಿಯು ಇದೀಗ ದೊಡ್ಡ ದೇಗುಲವಾಗಿರುವುದೇ ಇಲ್ಲಿನ ಹಣದ ವಹಿವಾಟಿಗೆ ಸಾಕ್ಷಿ ಎಂದು ಅವರು ದೂರುತ್ತಾರೆ.
ಮೈಮೇಲೆ ಬಂದ ದೇವರು: ಅರ್ಚಕರ ಪರವಾದ ಭಕ್ತರ ಗುಂಪು ಪ್ರತಿಭಟನೆಗೆ ಸಜ್ಜಾಗುತ್ತಿದ್ದ ಸಂದರ್ಭದಲ್ಲೇ ಮಹಿಳೆಯೊಬ್ಬರು ಮೈಮೇಲೆ ದೇವರು ಬಂತೆಂದು ಕುಣಿದಾಡಿದರು. ನನ್ನ ದೇವ ವನದ ವಿರುದ್ಧ ಮಾತನಾಡುವವರನ್ನು ಶಿಕ್ಷಿಸುವೆ ಎಂದು ಅವರು ಗುಡುಗುತ್ತಿದ್ದಾಗಲೇ ಮತ್ತೊಬ್ಬ ಮಹಿಳೆಯೂ ಕುಣಿದಾಡಿದರು. ಕೆಲ ಹೊತ್ತಿನ ನಂತರ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ವಿದ್ಯುತ್ ಪೂರೈಕೆ ತೀವ್ರ ವ್ಯತ್ಯಯ
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಾದ್ಯಂತ ಮತ್ತು ಗ್ರಾಮೀಣ ಪ್ರದೇಶದ ವಿವಿಧೆಡೆ ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಗ್ರಾಹಕರು ಸಮಸ್ಯೆ ಎದುರಿಸುವಂತಾಯಿತು. ನಗರದಲ್ಲಿ ಮಧ್ಯಾಹ್ನ 2 ಮತ್ತು ಸಂಜೆ 3 ತಾಸು ಸೇರಿದಂತೆ ಸುಮಾರು 5 ತಾಸು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ರಾಮನಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಹಲವೆಡೆ ವಿದ್ಯುತ್ ಸಮಸ್ಯೆ ಕಾಡಿತು. ಬಿಡದಿಯಲ್ಲಿರುವ ವಿದ್ಯುತ್ ವಿತರಣಾ ಘಟಕದಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯ ಪರಿಣಾಮ ಈ ಸಮಸ್ಯೆ ಉಂಟಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಅಪಘಾತ: ಯುವಕ ಸಾವು
ಹೊಸಕೋಟೆ: ಹೊಸಕೋಟೆ-ಚಿಂತಾಮಣಿ ರಸ್ತೆಯ ಸೊನ್ನದೇನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ.ತಾಲೂಕಿನ ಮಲ್ಲಿಮಾಕನಪುರದ ವಾಸಿ ಮುರಳೀಧರ (23)ಮೃತ ದುರ್ದೈವಿ. ಹೊಸಕೋಟೆಯಿಂದ ಗ್ರಾಮಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಹಠಾತ್ತನೆ ನಿಲುಗಡೆ ಮಾಡಿದ ಸಂದರ್ಭದಲ್ಲಿ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಮುರುಳೀಧರ ಸ್ಥಳದಲ್ಲೇ ಸಾವಿಗೀಡಾದರು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.