ಸಿಎಂ ರಾಜಿನಾಮೆಗೆ ರೈತ ಸಂಘ ಒತ್ತಾಯ
ದೇವನಹಳ್ಳಿ: ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ತೋರಿರುವುದೇ ಬಡ ಹೋರಾಟಗಾರ ವಿಠಲ ಭೀಮಪ್ಪ ಅರಭಾವಿ ರೈತನ ಆತ್ಮಹತ್ಯೆಗೆ ನೇರ ಕಾರಣಕರ್ತರಾದ ಮುಖ್ಯಮಂತ್ರಿ ಹಾಗೂ ಕೃಷಿ ಮಂತ್ರಿ ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿ ಹೊಸ ಬಸ್ ನಿಲ್ದಾಣ ಬಳಿ ಇರುವ ಇಲ್ಲಿನ ನಂಜುಂಡಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರಲ್ಲದೆ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.
ಜಿಲ್ಲಾ ರೈತ ಸಂಘ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ ರಾಜ್ಯ ಸರ್ಕಾರ ರೈತರ ರಕ್ಷಣೆಗಿಂತ ಸಕ್ಕರೆ ಕಾರ್ಖಾನೆ ಮಾಲೀಕರ ರಕ್ಷಣೆಯೇ ಮುಖ್ಯವಾಗಿದ್ದು ಅನ್ನ ನೀಡುವ ರೈತನಿಗೆ ರಕ್ಷಣೆಯೇ ಇಲ್ಲದಂತಾಗಿ ರಾಜ್ಯದಲ್ಲಿ ಪ್ರತಿದಿನ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರು. ಈಗ ಕಬ್ಬಿಗೆ ನಿಗದಿ ಪಡಿಸಿರುವ ಬೆಲೆ ಹಿಂದೆಯೇ ಪ್ರಕಟಿಸಿದ್ದರೆ ಅಮಾಯಕ ರೈತನ ಜೀವವಾದರೂ ಉಳಿಯುತ್ತಿತ್ತು ಎಂದು ತಿಳಿಸಿ ಕೂಡಲೆ ಬೆಲೆ ಆಯೋಗ ರಚನೆಯಾಗಬೇಕು ಎಂದು ಒತ್ತಾಯಿಸಿದರಲ್ಲದೆ ನ.30 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲು ರಾಜ್ಯ ರೈತ ಸಂಘ ನಿರ್ಧರಿಸಿದೆ ಎಂದರು.
ರೈತ ಮುಖಂಡರಾದ ವಕೀಲ ಸಿದ್ದಾರ್ಥ, ಎಂ.ವೆಂಕಟೇಶ್, ನಾರಾಯಣಸ್ವಾಮಿ, ರವಿಕುಮಾರ್, ಸಂಚಾಲಕ ಜಿ.ರವಿ ವಿ.ಗೋಪಾಲಕೃಷ್ಣ ಹಾಗೂ ರೈತ ಮಹಿಳೆಯರು ಭಾಗವಹಿಸಿ ಪೊಲೀಸ್ ಠಾಣೆ ಮುಂಭಾಗದ ಸರ್ಕಲ್ನಲ್ಲಿ ವೃತ್ತಾಕಾರದಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಉಪ ತಹಸೀಲ್ದಾರ್ ಅಜಿತೆ ರೈ ಆಗಮಿಸಿ ರೈತ ಮುಖಂಡರಿಂದ ಮನವಿ ಸ್ವೀಕರಿಸಿ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯಪಾಲರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಪ್ರತಿಭಟನಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ತಮ್ಮ ಸಿಬ್ಬಂದಿಯನ್ನು ನೇಮಿಸಿದ್ದರು. ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು.