ಸೋಂಪುರ ಪಿಡಿಓ ಮುರುಡಯ್ಯ ಲೋಕಾಯುಕ್ತ ಬಲೆಗೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.29
ತುಮಕೂರು ಜಿಲ್ಲೆಯ ಸೋಂಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಇಲ್ಲಿನ ಮುರುಡಯ್ಯ ಎಂಬುವವರ ಮನೆ ಮೇಲೆ ತುಮಕೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ರಮೇಶ್ಚಂದ್ರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ದಿನವಿಡೀ ಆಸ್ತಿ ವಿವರಗಳನ್ನು ಪರಿಶೀಲನೆ ಮಾಡಲಾಗಿದೆ. ಇಲ್ಲಿನ ಮಾರುತಿನಗರದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ದಾಳಿ ವೇಳೆ 81 ಲಕ್ಷ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಈ ಪೈಕಿ 6.75 ಲಕ್ಷ ಮೌಲ್ಯದ ಚಿನ್ನಾಭರಣ, 3.32 ಲಕ್ಷ ನಗದು, 3 ನಿವೇಶನಗಳಲ್ಲಿ ಕಟ್ಟಲಾಗಿರುವ ಮನೆಗಳು, 40 ಸಾವಿರಕ್ಕೂ ಅಧಿಕ ಮೌಲ್ಯದ ಬೆಳ್ಳಿ ವಸ್ತುಗಳು, 2 ಕಾರು, 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಮೊದಲು ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುರುಡಯ್ಯ ಕೆಲ ವರ್ಷದ ಹಿಂದೆ ಸೋಂಪುರಕ್ಕೆ ವರ್ಗಾವಣೆಯಾಗಿದ್ದರು. ಆಸ್ತಿ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ದಾಳಿ ವೇಳೆ ದಿಢೀರನೇ ಅಸ್ವಸ್ಥರಾದ ಮುರುಡಯ್ಯ ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ನಡೆಸಿ ನಂತರ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸಂಭಾಜಿ ಶಾಸಕ ಸ್ಥಾನ ಅನರ್ಹಗೊಳಿಸಿ
ಆನೇಕಲ್ಲು: ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು ಮರೆತು ತಾನು ಪ್ರತಿನಿಧಿಸುವ ರಾಜ್ಯ ಹಾಗೂ ಶಾಸಕ ಸ್ಥಾನಕ್ಕೆ ಚ್ಯುತಿ ತಂದಿರುವ ಎಂಇಎಸ್ ಶಾಸಕ ಸಂಭಾಜಿಯ ಶಾಸಕ ಸ್ಥಾನ ಅನರ್ಹಗೊಳಿಸಿ ಗಡೀಪಾರು ಮಾಡಬೇಕೆಂದು ಕರವೇ ಜಿಲ್ಲಾಧ್ಯಕ್ಷ ಪುನೀತ್ ಆಗ್ರಹಿಸಿದ್ದಾರೆ. ಅವರು ತಾಲೂಕಿನ ಹೆಬ್ಬಗೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಮಾತನಾಡಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವುದು ಆ ಭಾಗದ ಹಾಗೂ ರಾಜ್ಯದ ಜನರ ಹಿತದೃಷ್ಟಿ ಕಾಪಾಡಲು. ರಾಜ್ಯದ 6 ಕೋಟಿ ಜನರ ಪ್ರತಿನಿಧಿಗಳಾದ 270 ಶಾಸಕರು ಅಮೂಲ್ಯ ಸಮಯ ಹಾಗೂ ಆಲೋಚನೆಗಳನ್ನು ಹರಿಬಿಟ್ಟು ನಾಡಿನ ಬಗ್ಗೆ ಚಿಂತನೆ ನಡೆಸುತ್ತಿದ್ದರೇ ಸಂಭಾಜಿ ನಾಲ್ಕು ಜನರಿದ್ದರೇ ಶವ ಯಾತ್ರೆ ಮಾಡುವ ಉದ್ಧಟತನ ಮಾತಾಡಿದ್ದಾರೆ. ಈ ಕೂಡಲೇ ಕನ್ನಡ ಪರ ಸಂಘಟನೆಗಳು ಸಂಭಾಜಿಯ ಅಣಕು ಶವ ಯಾತ್ರೆ ನಡೆಸಿ ಆತನಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಬೇಕೆಂದರು. ಸಂಭಾಜಿಯು ಮಹಾ ಮೇಳಾವ ನಡೆಸುವುದು, ಸರ್ಕಾರದ ವಿರುದ್ಧ ಪರ್ಯಾಯ ಸಭೆ ನಡೆಸುವುದು ಮಾಡಿ ಕರ್ನಾಟಕ ಜನತೆಯನ್ನು ಕೆಣಕುತ್ತಿದ್ದಾರೆ. ಅವರು 6 ಕೋಟಿ ಕನ್ನಡಿಗರ ಕ್ಷಮೆ ಯಾಚಿಸಬೇಕು. ಸರ್ಕಾರವೂ ಅವರ ವಿರುದ್ಧ ತೀವ್ರ ಕ್ರಮ ವಹಿಸಬೇಕು. ಈ ಕೂಡಲೇ ಸಂಭಾಜಿಯನ್ನು ಗಡೀಪಾರು ಮಾಡಿ ಶಿಕ್ಷೆ ವಿಧಿಸಬೇಕೆಂದರು.