ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಮೀಣಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿ

Rashmi Kasaragodu
Updated On : 1 Dec 2013, 1:40 am

ಕ.ಪ್ರ.ವಾರ್ತೆ  ರಾಮನಗರ ನ.30
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಗ್ರಾಮೀಣಾಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಕರೆ ನೀಡಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ತಾಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ  ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಬೇಕು ಎಂದರು.
ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮಾತ್ರವಲ್ಲದೆ ಸಾರ್ವಜನಿಕರ ಸಹಭಾಗಿತ್ವವೂ
ಅಗತ್ಯವಾಗಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಸಮರ್ಪಕ ಜಾರಿ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂ. ಕಚೇರಿಯಲ್ಲೂ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದರು.
ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ರು.10 ಲಕ್ಷ ಅನುದಾನ ಒದಗಿಸುತ್ತಿದ್ದು, ಉಳಿಕೆ ರು.2 ಲಕ್ಷವನ್ನು ಗ್ರಾ.ಪಂ. ಭರಿಸಬೇಕು. ಮಂಚನಾಯಕನಹಳ್ಳಿಯಲ್ಲಿ ಸೇವಾ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ ಎಂದು ಸುರೇಶ್ ಶ್ಲ್ಲಾಘಿಸಿದರು.
ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ, ಸಾಮಾಜಿಕ ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ಜಲಾನಯನ, ಪಂಚಾಯತ್ರಾಜ್ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಕ್ಕೂ ಬಿಡುಗಡೆ ಮಾಡಿದೆ. ಇದನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಕರೆಯಿತ್ತರು.  
ಸರ್ಕಾರಕ್ಕೆ ಪ್ರಸ್ತಾವನೆ: ರಾಮನಗರ ಜಿಲ್ಲೆಯ ಮಂಚನಾಯಕನಹಳ್ಳಿ, ಬಿಡದಿ, ಕುದೂರು, ಹಾರೋಹಳ್ಳಿ ಈ ನಾಲ್ಕು ಗ್ರಾ.ಪಂ.ಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ನಗರಾಭಿವದ್ಧಿ ಹಾಗೂ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸುರೇಶ್ ಹೇಳಿದರು.
ಈ ವಿಷಯದಲ್ಲಿ ಗ್ರಾ.ಪಂ.ಗಳು ನಿರ್ಣಯ ಕೈಗೊಂಡು ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಕಳುಹಿಸಬೇಕು. ಚುನಾಯಿತ ಪ್ರತಿನಿಧಿಗಳು ಇದಕ್ಕೆ ಸ್ಪಂದಿಸಿ, ಅಗತ್ಯ ಸಹಕಾರ ನೀಡಿದರೆ ಆದಷ್ಟು ಜರೂರಾಗಿ ಮೇಲ್ದರ್ಜೆಗೇರಿಸಲು ಸಾಧ್ಯ ಎಂದರು.  
ಕಾವೇರಿ ನೀರು ಪೂರೈಕೆ: ಬಿಡದಿ ಹೋಬಳಿಯ ಗ್ರಾಮಗಳು ಬೆಂಗಳೂರು ಕೊಳಚೆ ನೀರಿನಿಂದ ಸಾಕಷ್ಟು ತೊಂದರೆ ಅನುಭವಿಸುತಿವೆ. ಬೈರಮಂಗಲ ಕೆರೆಯಲ್ಲಿ ಕೊಳಚೆ ತುಂಬಿರುವ ಪರಿಣಾಮ ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಪೂರೈಸುತ್ತಿರುವ ಕಾವೇರಿ ನೀರಿನಿಂದಲೇ ಬಿಡದಿ ಹೋಬಳಿಯ 25-30 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.  
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ,  ಎಚ್.ಎಲ್.ಚಂದ್ರ,  ಲಕ್ಷ್ಮೀ ಮಂಜುನಾಥ್ ಮಾತನಾಡಿದರು. ಸಮಾರಂಭದಲ್ಲಿ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಸದಸ್ಯೆ ಶಾಂತಮ್ಮ,  ಗ್ರಾ.ಪಂ. ಅಧ್ಯಕ್ಷ ಹನುಮಂತಯ್ಯ, ತಾ.ಪಂ. ಸದಸ್ಯರಾದ ಮಹಿಪತಿ, ಗೀತಾ ಪುಟ್ಟರಾಜು, ಪಿ.ನಾಗರಾಜು, ಎಸ್.ಪಿ.ಆರ್. ತಿಮ್ಮೇಗೌಡ, ಲಕ್ಷ್ಮಣಣ್ಭಾಗವಹಿಸಿದ್ದರು.


ಬಾಲಕೃಷ್ಣ ಅಸಮಾಧಾನ
ನೆರೆಯ ಆಂಧ್ರ, ತಮಿಳುನಾಡು, ಕೇರಳ ಸಹಿತ ದೇಶದ ವಿವಿಧೆಡೆ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಉದ್ಯೋಗ ಖಾತ್ರಿ ಯೋಜನೆ ರಾಜ್ಯದಲ್ಲಿ ವಿಫಲವಾಗಿದೆ. ಇದಕ್ಕೆ ನಮ್ಮಲ್ಲಿರುವ ಒಳ ಜಗಳವೇ ಕಾರಣ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.  ಬೈರಮಂಗಲ ಕೆರೆಯ ನೀರನ್ನು ಶುದ್ಧೀಕರಿಸಿ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಕೆಐಎಡಿಬಿಯು ಘಟಕ ಸ್ಥಾಪಿಸಲು ಮುಂದಾಗಿದೆ. ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯೂ ಶುದ್ಧೀಕರಣ ಘಟಕ ಸ್ಥಾಪಿಸಿದಲ್ಲಿ ಈ ನೀರನ್ನು ಕೃಷಿ ಮತ್ತಿತರೆ ಉದ್ದೇಶಗಳಿಗೂ ಬಳಸಬಹುದು ಎಂದರು.  ಬೈರಮಂಗಲ ಕೆರೆ ನೀರು ಮುಂದೆ ಹೋಗುತ್ತಿಲ್ಲ. ಈ ನಿಟ್ಟಿನಲ್ಲಿ ರು.600 ಕೋಟಿ ರೂ ವೆಚ್ಚದಸಿಮೆಂಟ್ ಲೈನಿಂಗ್ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ನೀರು ಸರಾಗವಾಗಿ ಮುಂದೆ ಹರಿದು ವ್ಯವಸಾಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement