ಮಾರಾಟವಾದ ಜೆಡಿಎಸ್ ಸದಸ್ಯರನ್ನು ಹಿಡಿದು ಒದೀರಿ
ಕ.ಪ್ರ.ವಾರ್ತೆ ರಾಮನಗರ ನ.30
ಐದು ಲಕ್ಷಕ್ಕೋ ಹತ್ತು ಲಕ್ಷಕ್ಕೋ ಮಾರಾಟ ಮಾಡಿಕೊಂಡು ಹೋದ ಜೆಡಿಎಸ್ ತಾ.ಪಂ. ಸದಸ್ಯರನ್ನು ಹಿಡಿದುಕೊಂಡು ಒದೀರಿ. ಅವಾಗ ಪಕ್ಷದ ಚಿಹ್ನೆ, ಸವಲತ್ತು ಪಡೆದು ಗೆದ್ದು ಅನ್ಯ ಪಕ್ಷದವರಿಗೆ ಬಿಕರಿಯಾದ ಪಕ್ಷದ್ರೋಹಿಗಳು ಬುದ್ಧಿ ಕಲಿಯುತ್ತಾರೆ.
ಹೀಗೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ತಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕೈಕೊಟ್ಟ ಸ್ವಪಕ್ಷೀಯ ಸದಸ್ಯರ ವಿಷಯವಾಗಿ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದಲ್ಲಿ ಶನಿವಾರ ರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಕಾರ್ಯಕರ್ತನೊಬ್ಬ ಪಕ್ಷದ್ರೋಹಿಗಳ ವಿಷಯವಾಗಿ ಗಮನ ಸೆಳೆದಾಗ ಮೇಲಿನ ಮಾತು ಹೇಳಿದರು.
ತಾ.ಪಂ. ಚುನಾವಣೆ ಸೋಲಿನಿಂದ ತಮಗಾದ ಮುಖಭಂಗಕ್ಕೆ ಮೊದಲೇ ಆಕ್ರೋಶಗೊಂಡಿದ್ದ ಕುಮಾರಸ್ವಾಮಿ, ಕಾರ್ಯಕರ್ತನ ಪ್ರಶ್ನೆಗೆ ಮತ್ತಷ್ಟು ಕೆಂಡಾಮಂಡಲರಾದರು. ಸರ್ಕಾರಿ ಕಾರ್ಯಕ್ರಮ ಎನ್ನುವುದನ್ನೂ ಮರೆತು ಪಕ್ಷದ್ರೋಹಿಗಳ ವಿರುದ್ಧ ವಾಗ್ಬಾಣ ತೊಟ್ಟರು.
ದುಡ್ಡಿಗೆ ಮಾರಾಟ ಆಗುವವರು ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೆ ಕೊಳ್ಳುವವರೂ ಇರುತ್ತಾರೆ. ಪಕ್ಷದಲ್ಲಿ ಎಲ್ಲರೂ ಅಪ್ರಾಮಾಣಿಕರಲ್ಲ. ಪ್ರಾಮಾಣಿಕ ಕಾರ್ಯಕರ್ತ ಇರುವವರೆಗೆ ರಾಮನಗರದಲ್ಲಿ ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಜೆಡಿಎಸ್ ಪಕ್ಷವನ್ನು ಮುಗಿಸಲಾಗದು ಎಂದು ವಿರೋಧಿಗಳಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿದಾಕ್ಷಣ ಈ ಪಕ್ಷವನ್ನು ಮುಗಿಸಬಹುದು ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ಯಾವ ಕಾರಣಕ್ಕೂ ನಮ್ಮ ಕಾರ್ಯಕರ್ತರ ತಂಟೆಗೆ ಬಂದರೆ ಬಿಡುವುದಿಲ್ಲ. ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡುವ ಮೂಲಕ ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳುವ ಜತೆಗೆ ಕಾರ್ಯಕರ್ತನನ್ನು ಸಮಾಧಾನಿಸಿದರು.
ಸಿಪಿಐ ವಿರುದ್ಧ ಕಿಡಿ: ರಾಮನಗರ ಎಪಿಎಂಸಿ ಬಳಿ ಅಪಘಾತವಾದಾಗ ಉದ್ರಿಕ್ತ ಜನರನ್ನು ನಿಯಂತ್ರಿಸುವುದಕ್ಕೆ ಲಾಠಿ ಪ್ರಹಾರ ನಡೆಸಿದಾಗ ತಪ್ಪಿತಸ್ಥರನ್ನು ಬಿಟ್ಟು, ಅಮಾಯಕರನ್ನು ಥಳಿಸಲಾಗಿದೆ. ಆರೋಪಿಗಳ ಬದಲು ಅಮಾಯಕರ ಬಂಧನವಾಗುತ್ತಿದೆ ಎಂದು ವಿಭೂತಿಕೆರೆ ಗ್ರಾಮಸ್ಥರು ನೀಡಿದ ದೂರಿನಿಂದ ಕೆರಳಿದ ಕುಮಾರಸ್ವಾಮಿ ರಾಮನಗರ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಕಿಡಿ ಕಾರಿದರು.
ಈ ಘಟನೆಯೂ ಕಾರ್ಯಕ್ರಮದ ವೇದಿಕೆಯಲ್ಲೇ ನಡೆಯಿತು. ಒಂದು ಹಂತದಲ್ಲಿ ಸಹನೆ ಕಳೆದುಕೊಂಡವರಂತಾದ ಕುಮಾರಸ್ವಾಮಿ, ಆ ಸಿಪಿಐ ಸುಬ್ರಹ್ಮಣ್ಯ ಯಾರು ಏನು ಎನ್ನುವುದೆಲ್ಲಾ ಗೊತ್ತಿದೆ. ಆತ ಹಗಲು ಎಲ್ಲಿರುತ್ತಾನೆ, ರಾತ್ರಿ ಎಲ್ಲಿರುತ್ತಾನೆ ಎನ್ನುವ ಮಾಹಿತಿಯೂ ನನ್ನಲ್ಲಿದೆ. ನಾನು ಕಣ್ಣು ಮುಚ್ಚಿ ಕುಳಿತಿಲ್ಲ. ನನ್ನ ಸಹನೆಯನ್ನು ಪರೀಕ್ಷಿಸುವುದು ಬೇಡ ಎಂದು ಎಚ್ಚರಿಸಿದರು.
ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಯಾವ ರೀತಿ ವರ್ತಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದರ ಬಗ್ಗೆ ಸೋಮವಾರ ಸದನದಲ್ಲಿ ಚರ್ಚೆ ನಡೆಸುತ್ತೇನೆಂದರಲ್ಲದೆ, ವೇದಿಕೆಯಲ್ಲಿದ್ದಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರಿಗೆ ಫೋನಾಯಿಸಿ ತರಾಟೆಗೆ ತೆಗೆದುಕೊಂಡರು. ನಂತರ ಗೃಹ ಸಚಿವ ಕೆ.ಜೆ.ಜಾರ್ಜ್ ಜತೆಗೂ ಮಾತನಾಡಿದರು.
ಮಾಜಿ ಶಾಸಕ ಕೆ.ರಾಜು, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಸದಸ್ಯರಾದ ವಿಜಯಕುಮಾರ್, ರಘುಕುಮಾರ್, ಎಂ.ಕೆ.ಧನಂಜಯ, ಎಚ್.ಎಲ್.ಚಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ಕೂಟಗಲ್ ದೇವೇಗೌಡ ಮತ್ತಿತರರು ಭಾಗವಹಿಸಿದ್ದರು.
ಚಿಲ್ಲರೆ ರಾಜಕಾರಣ ನಡೆಯುತ್ತಿದೆ
ಕೆಲ ಕಾಂಗ್ರೆಸ್ ಮುಖಂಡರು ರಾಮನಗರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಚಿಲ್ಲರೆ ರಾಜಕಾರಣಿಗಳಿಗೆ ಬೆಲೆಕೊಟ್ಟು ಅಧಿಕಾರಿಗಳೇನಾದರೂ ಜನ ವಿರೋಧಿ ನೀತಿಯನ್ನ ಅನುಸರಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಅಧಿಕಾರಿಗಳು ಯಾವ ಶಿಫಾರಸು, ಲಾಬಿಗೂ ಮಣಿಯದೆ ಕಾನೂನು ಜತೆಗೆ ಮಾನವೀಯ ಚೌಕಟಿನಲ್ಲಿ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು. ಕಾಲು ಬಾಯಿ ಜ್ವರದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಪ್ರಾಕೃತಿಕ ಸಂಪತ್ತಿನ ಲೂಟಿ ಹಣ ನನ್ನಲ್ಲಿದ್ದಿದ್ದರೆ ಪ್ರತಿ ರಾಸುವಿಗೆ ರು.1 ಲಕ್ಷದವರೆಗೆ ಪರಿಹಾರ ನೀಡುತ್ತಿದ್ದೆ ಎಂದು ಎದಿರೇಟು ನೀಡಿದರು.
ಸಿದ್ದುಗೆ ನಾನೇ ಸಹಕರಿಸಿದೆ
ಬೆಳಗಾವಿಯಲ್ಲಿ ರೈತ ಆತ್ಮಹತ್ಯೆಯಾದ ನಂತರ ಸಿಎಂ ಸಿದ್ದರಾಮಯ್ಯನವರು ಸದನಕ್ಕೆ ಬರಲು ತಯಾರಿರಲೇ ಇಲ್ಲ. ಅಂತಹ ಸಂದರ್ಭದಲ್ಲಿ ಅವರಿಗೆ ಧ್ವನಿ ನೀಡಿದ್ದೇ ನಾನು. ಸರಿಯಾದ ರೀತಿಯಲ್ಲಿ ಸದನದ ನಡವಳಿಕೆ ನಡೆಯುವುದಕ್ಕೆ ಸ್ಟೇಟ್ಮನ್ಸ್ಶಿಪ್ ಪ್ರೀತಿಯಲ್ಲಿ ನಡವಳಿಕೆ ಪ್ರದರ್ಶನ ಮಾಡಿದ್ದೇನಷ್ಟೇ ಎಂದು ಕುಮಾರಸ್ವಾಮಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ಮತ್ತು ಕೆಜೆಪಿ ನಾಯಕರು ಸದನದ ಕಲಾಪ ನಡೆಯದ ರೀತಿಯಲ್ಲಿ ಧರಣಿ ನಡೆಸಿದ್ದರು. ಆದರೆ, ನಾನು ನಿನ್ನೆ ಸರಿಯಾದ ನಿರ್ಧಾರ ಮಾಡದಿದ್ದರೆ ಸದನದ ಕಲಾಪಗಳು ಮುಂದೂಡಿಕೆ ಆಗುತ್ತಿದ್ದವು. ಆ ರೀತಿ ಕಲಾಪ ಮುಂದೆ ಹೋಗಿದ್ದರೆ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ನಾನು ಸಿಎಂ ಬಗ್ಗೆ ಮೃದುಧೋರಣೆ ತಳೆದಿಲ್ಲ ಎಂದು ಸ್ಪಷ್ಟಪಡಿಸಿದರು. ಶಾದಿಬಾಗ್ಯ ಹಿಡಿದು ಕುಳಿತಿದ್ದವರು ರೈತನ ಆತ್ಮಹತ್ಯೆಯಾಗುತ್ತಲೇ ಆ ಹೋರಾಟಕ್ಕೆ ಧುಮುಕಿದರು ಎಂದು ಯಡಿಯೂರಪ್ಪ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.