ಶಿಕ್ಷಕರಿಗೆ ಅನ್ಯ ಕರ್ತವ್ಯಗಳನ್ನು ಹೇರಬೇಡಿ
ರಾಮನಗರ: ಶಿಕ್ಷಕರಿಗೆ ಪಾಠ-ಪ್ರವಚನ ಹೊರತಾದ ಅನ್ಯ ಕರ್ತವ್ಯಗಳನ್ನು ಹೇರಬೇಡಿ. ಶಾಲೆಗಳ ನಿರ್ವಹಣೆಗೆ ವಾರ್ಷಿಕ ಅನುದಾನ ಹೆಚ್ಚಳ ಮಾಡಬೇಕು. ಪ್ರತಿ ಶಾಲೆಗೆ ಡಿ ದರ್ಜೆ ನೌಕರನ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು.
ಇವೇ ಮುಂತಾದ ರಚನಾತ್ಮಕ ಬೇಡಿಕೆಗಳು ರಾಮನಗರ ತಾಲೂಕಿನ ಚನ್ನಮಾನಹಳ್ಳಿಯಲ್ಲಿ ವಿಭೂತಿಕೆರೆ ಗ್ರಾ.ಪಂ.ನಿಂದ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ಮಕ್ಕಳಿಂದ ವ್ಯಕ್ತವಾದವು.
ಎಲ್ಲ ಶಾಲೆಗಳಿಗೂ ಆಂಗ್ಲ ಭಾಷೆ ಶಿಕ್ಷಕರು, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್, ಹೆಚ್ಚುವರಿ ಕೊಠಡಿ, ಕಟ್ಟಡ ದುರಸ್ತಿ, ಸೈಕಲ್ ಸ್ಟ್ಯಾಂಡ್, ಬೆಳಕಿನ ವ್ಯವಸ್ಥೆಯೂ ಅಗತ್ಯ ಎಂದು ಸಭೆಯಲ್ಲಿ ಮಕ್ಕಳು ಸಮಸ್ಯೆಗಳನ್ನು ಅನಾವರಣಗೊಳಿಸಿದರು.
ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಕೇವಲ ಬೆರಳೆಕೆಯಷ್ಟು ಮಾತ್ರವೇ ಇರುತ್ತದೆ. ಅಂತಹ ಕೆಲಸಕ್ಕೂ ಶಿಕ್ಷಕರನ್ನೇ ನೇಮಿಸಲಾಗುತ್ತದೆ. ಜನ ಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಸಹಿತ ನಾನಾ ಹೊರೆ ಹೇರಲಾಗುತ್ತಿದೆ. ಇದರಿಂದಾಗಿ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆ ಉಂಟು ಮಾಡುವುದು ಯಾವ ನ್ಯಾಯ ಎಂದು ಮಕ್ಕಳು ಪ್ರಶ್ನಿಸಿದರು.