ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ತರಬೇತಿ
ಕನಕಪುರ: ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಗ್ರಾಮೀಣ ಮಹಿಳಾ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಆಸಕ್ತ ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ಊಟವಸತಿ ಸಹಿತವಾದ ಬ್ಯೂಟಿ ಕಲ್ಚರ್, ಬ್ಯೂಟಿಪಾರ್ಲರ್, ಮ್ಯಾನೇಜ್ಮೆಂಟ್, ಹೇರ್ ಡ್ರೆಸ್ಸಿಂಗ್ ತರಬೇತಿ ನೀಡಲಾಗುವುದು.
ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವ 18 ರಿಂದ 35 ವಯೋವುತಿಯ ಮಹಿಳೆಯರು ಈ ಉಚಿತ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಿ ಏ.4 ರಂದು ನೇರ ಸಂದರ್ಶನಕ್ಕೆ ಹಾಜರಾಗಲು ನಿರ್ದೇಶಕ ಸಿ.ವಿ.ಪ್ರಕಾಶ್ ಕೋರಿದ್ದಾರೆ.
ವಿವರಗಳಿಗೆ 080 275 62260, 9480600849, 9972381707 ಸಂಪರ್ಕಿಸಿ.
ಅನುಭವಮಂಟಪ ಸಂಸತ್ನ ಕಾರ್ಯ
ನಿರ್ವಹಿಸುತ್ತಿತ್ತು: ಡಾ. ಕೆಂಪೇಗೌಡ
ಬೆಂಗಳೂರು: ವಚನ ಸಾಹಿತ್ಯವು ಮಾನವನ ಹಿತ ಕಾಯುವ ಉದ್ದೇಶ ಹೊಂದಿದ್ದು, ಅಂದಿನ ಕಾಲಘಟ್ಟದಲ್ಲಿ ಅನುಭವ ಮಂಟಪ ಸಂಸತ್ನ ಕಾರ್ಯ ನಿರ್ವಹಿಸುತ್ತಿತ್ತು ಎಂದು ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ. ಟಿ.ಕೆ. ಕೆಂಪೇಗೌಡ ಅಭಿಪ್ರಾಯಪಟ್ಟರು. ಕನ್ನಡ ಯುವಜನ ಸಂಘ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯ ಕಾಲದಲ್ಲಿ ಶ್ರಮದಿಂದ ಹಣ ಸಂಪಾದನೆ ಮಾಡಲಾಗುತ್ತಿತ್ತು. ಪ್ರಸ್ತುತ ಹಣದಿಂದ ಹಣ ಗಳಿಸಲಾಗುತ್ತದೆ. ಕಾಯಕದಲ್ಲಿ ಆತ್ಮಶಕ್ತಿ ಬೇಕು. ಕಾಯಕದಿಂದ ಬಂದ ಹಣದಲ್ಲಿ ಜ್ಞಾನ, ಧರ್ಮಕ್ಕಾಗಿ ನಿಷ್ಠೆಯಿಂದ ದಾಸೋಹ ಮಾಡಬೇಕು. ಸತ್ಯ, ಶುದ್ಧ ಕಾರ್ಯದಿಂದ ಉತ್ತಮ ವ್ಯಕ್ತಿತ್ವ ಮತ್ತು ನೈತಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಇಂದು ಸತ್ಯ ಹರಿಶ್ಚಂದ್ರ ನಾಟಕ
ಮಾಗಡಿ: ಶ್ರೀರಂಗನಾಥಸ್ವಾಮಿ ಕೃಪಾ ಪೋಷಿತ ನಾಟಕ ಮಂಡಲಿ ಹಾಗೂ ಶ್ರೀ ಬುದ್ಧ ಬಸವಣ್ಣ ವಿವೇಕಾನಂದ ಯುವ ಸೇನೆ ವತಿಯಿಂದ ಏ.2 ರಂದು ರಾತ್ರಿ 8.30ಕ್ಕೆ ಪಟ್ಟಣದ ಎನ್.ಇ.ಎಸ್.ಬಡಾವಣೆಯಲ್ಲಿ ಸತ್ಯ ಹರಿಶ್ಚಂದ್ರ ಅಥವಾ ವಿಶ್ವಾಮಿತ್ರ ಗರ್ವಭಂಗ ಎಂಬ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಆಗ್ರೋ ಪುರುಷೋತ್ತಮ್ ತಿಳಿಸಿದ್ದಾರೆ.
'ಮಂಕುತಿಮ್ಮನ ಕಗ್ಗ' ಕನ್ನಡದ
ಭಗವದ್ಗೀತೆ: ರಾಮಚಂದ್ರಮೂರ್ತಿ
ಬೆಂಗಳೂರು: ಎಲ್ಲ ಕಾಲದಲ್ಲಿಯೂ ಜೀವನದ ಸಾರ್ಥಕ ಪಡೆಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ 'ಮಂಕುತಿಮ್ಮನ ಕಗ್ಗ'ವು ಕನ್ನಡದ ಭಗವದ್ಗೀತೆ ಎಂದು ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ವಿದ್ವಾನ ಎನ್.ವಿ. ರಾಮಚಂದ್ರಮೂರ್ತಿ ಅಭಿಪ್ರಾಯಪಟ್ಟರು.
ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು. ಡಿ.ವಿ.ಜಿ ನಮ್ಮನ್ನು ಅಗಲಿ 38 ವರ್ಷ ಕಳೆದರೂ ಪ್ರಸ್ತುತ ಯಾವುದೇ ವಿಷಯ ಬರಲಿ ಕಗ್ಗದೊಳಗಿನ ಸಾಲುಗಳಿಂದ ಅರ್ಥಪೂರ್ಣವಾಗಿ ತಿಳಿಹೇಳಬಹುದು ಎಂದು ತಿಳಿಸಿದರು. ಜೀವನ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಕಗ್ಗ ಅತ್ಯಂತ ಉಪಯುಕ್ತವಾಗಿದೆ. ಜೀವನದ ಸಾರ್ಥಕತೆಯನ್ನು ಹೊಂದಲು ಇದರ ಮೊರೆಹೋಗಬೇಕು. ಕಗ್ಗವನ್ನು ಎಲ್ಲರೂ ಓದಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕಿನ ಮೇಲೂರು ಶಾಖಾಧಿಕಾರಿ ಇಂದೂ ಪಾಟೀಲ್, ಕೆಲಸದ ಒತ್ತಡದಲ್ಲಿ ನಾವು ನಮ್ಮತನವನ್ನು ಮರೆತ್ತಿದ್ದು, ಜೀವನ ಉತ್ಸಾಹ, ಹುಮ್ಮಸ್ಸು ನೀಡುವುದರೊಂದಿಗೆ ಡಿ.ವಿ.ಜಿ ಅವರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಕಗ್ಗದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು. ಹಿರಿಯ ಗಾಯಕ ವಿದ್ವಾನ ಎ.ವಿ. ನಾರಾಯಣ್ ಮತ್ತು ಟಿ. ವೆಂಕಟರಮಣ ಹಾಗೂ ಅಕಾಡೆಮಿ ಸಂಸ್ಥಾಪಕಿ ಗಾಯತ್ರಿ ಕೇಶವ್ ಡಿ.ವಿ.ಜಿಯ ಅಂತಃಪುರದ ಆಯ್ದ ಗೀತೆಗಳನ್ನು ಹಾಡಿದರು. ಸಹಕಾರ್ಯದರ್ಶಿ ಮಹೇಶ್, ನೃತ್ಯಕಲಾವಿದೆ ಆರತಿ ಸುರೇಶ್, ಸದಸ್ಯರಾದ ಕೆ.ಎನ್. ಸುರೇಶ್, ಪೋಷಕ ಎಂ. ದಿನೇಶರಾವ್, ಕಿರುತೆರೆ ನಟ ವಾಸುದೇವ್, ಗಾಯಕಿ ಸರಸ್ವತಿ ವಾಸುದೇವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.