ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೋದಿ ಅಲೆಗೆ ಕೊಚ್ಚಿ ಹೋಗಲಿದೆ ಕಾಂಗ್ರೆಸ್

Rashmi Kasaragodu
Updated On : 2 Apr 2014, 2:52 am

ಬೆಂಗಳೂರು: ಮೋದಿ ಸುನಾಮಿ ಇದ್ದಂತೆ. ಆ ಸುನಾಮಿಯಲ್ಲಿ ಈ ಬಾರಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗಲಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಹೇಳಿದರು.
ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಿಜೆಪಿಗೆ ಕೋಮುವಾದಿ ಎಂಬ ಪಟ್ಟ ಕಟ್ಟಿದೆ. ಆದರೆ ನಮ್ಮ ಕ್ಷೇತ್ರದಲ್ಲಿರುವ ಬಹುಪಾಲು ಮುಸ್ಲಿಮರ ಓಟಿನಿಂದಾಗಿಯೇ ನಾನು ಪ್ರತಿ ಚುನಾವಣೆ ಗೆಲ್ಲುತ್ತಿದ್ದೇನೆ ಎಂದರು.
ವೀರಪ್ಪ ಮೊಯ್ಲಿ ಮತ್ತು ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಒಳ ಒಪ್ಪಂದ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನನ್ನನ್ನು ಸೋಲಿಸಬೇಕೆಂಬ ಕುತಂತ್ರದಿಂದ ಈ ರೀತಿ ಮಾಡಿದ್ದಾರೆ. ನನಗೆ ವೀರಪ್ಪ ಮೊಯ್ಲಿ ಜತೆಗೆ ಮಾತ್ರ ನೇರಸ್ಪರ್ಧೆ. ಆದರೆ ಈ ಕ್ಷೇತ್ರದಲ್ಲಿ ನಾನು ಗೆಲ್ಲುವುದು ನಿಶ್ಚಿತ ಎಂದರು.
ಕುಮಾರಸ್ವಾಮಿ ಪಲಾಯನವಾದಿ. ಅವರ ಕ್ಷೇತ್ರವನ್ನು ಭದ್ರವಾಗಿ ಇಟ್ಟುಕೊಳ್ಳಲು ಅವರಿಗೆತಿಳಿದಿಲ್ಲ. ನನ್ನ ಕರ್ಮಭೂಮಿ ಎಂದು ಹೇಳುತ್ತಾ ರಾಮನಗರಕ್ಕೆ ಬಂದರು. ಈಗ ದಿಢೀರನೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಿದ್ದಾರೆ. ತಂದೆ, ಮಗ ಕಣ್ಣೀರು ಸುರಿಸುತ್ತಾ ಜನರನ್ನು ಸೆಳೆಯುತ್ತಾರೆ ಎಂದು ಟೀಕಿಸಿದರು.
ಚುನಾವಣೆ ಗಿಮಿಕ್: ಮಂಗಳೂರು, ಕಾರ್ಕಳದಲ್ಲಿ ಸೋತ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ಸ್ಪರ್ಧಿಸಿದರು. ಇಲ್ಲಿ ಅಚಾನಕ್ಕಾಗಿ ಗೆಲವು ಸಾಧಿಸಿದ್ದಾರೆ. ಚುನಾವಣೆ ಗಿಮಿಕ್‌ಗೆಂದು ಎತ್ತಿನ ಹೊಳೆ ಯೋಜನೆಗೆ ಮುಖ್ಯಮಂತ್ರಿ ಕರೆತಂದು ಚಾಲನೆ ನೀಡಿದರು. ಆದರೆ ನೀರಿನ ಉತ್ಪತ್ತಿ ಪ್ರದೇಶವನ್ನು ಬಿಟ್ಟು ಬಾಲದಲ್ಲಿ ಉದ್ಘಾಟನೆ ಮಾಡಿದ್ದಾರೆ. ಆದರೆ ಪರಮಶಿವಯ್ಯ ವರದಿ ಜಾರಿಗೆ ತನ್ನಿ ಎಂಬುದು ಅಲ್ಲಿನ ಜನರ ಬೇಡಿಕೆ ಎಂದರು.
ಜಗದೀಶ್ ಶೆಟ್ಟರ್ ಅವರು ತಮ್ಮ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ  2340 ಕೋಟಿ ಹಣ ಮೀಸಲಿಟ್ಟಿದ್ದಾರೆ. ಈ ಹಣವನ್ನು ನಂಬಿಕೊಂಡು ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ವೀರಪ್ಪ ಮೊಯ್ಲಿ ಅವರು ಸುಮ್ಮನೆ ಕೇಂದ್ರದಿಂದ ಹಣ ತಂದಿರುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಆಂತರಿಕ ಕಚ್ಚಾಟದಿಂದ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ಸೋತಿದೆ. ಪರಾಭವದಿಂದ ನಾವು ಪಾಠ ಕಲಿತಿದ್ದೇವೆ. ಈಗ ಆ ಪರಿಸ್ಥಿತಿ ಇಲ್ಲ. ಕೆ.ಜೆ.ಪಿ, ಬಿಎಸ್ಸಾರ್ ಎಂಬ ವಿಭಾಗಗಳು ಕೂಡ ಇಲ್ಲ. ಜನರು ಕೂಡ ಇದರಿಂದ ಸಂತೋಷಗೊಂಡಿದ್ದಾರೆ. ಹಾಗಾಗಿ ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಣಾಳಿಕೆ ಬಿಡುಗಡೆ: ಬುಧವಾರ ಕ್ಷೇತ್ರದ ಪ್ರಣಾಳಿಕೆಯನ್ನು ಚಿಕ್ಕಬಳ್ಳಾಪುರ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಗುವುದು. ಪ್ರಣಾಳಿಕೆ 18 ಅಂಶಗಳನ್ನು ಒಳಗೊಂಡಿದೆ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಪ್ರಮುಖ ಅಂಶಗಳನ್ನು ಇದು ಒಳಗೊಂಡಿದೆ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement