ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚುನಾವಣಾ ಪ್ರಚಾರಕ್ಕೆ ಬಿಸಿಲ ಬಿಸಿ

Rashmi Kasaragodu
Updated On : 3 Apr 2014, 1:11 am

ವಿಶೇಷ ವರದಿ
ರಾಮನಗರ: ಬೆಂಗಳೂರು ಗ್ರಾಮಾಂತರದಲ್ಲಿ ಚುನಾವಣೆ ಅಬ್ಬರಕ್ಕೆ ಅಡ್ಡಿಯಾಗಿದ್ದ ಯುಗಾದಿ ಮುಗಿದಾಯ್ತು. ಮತದಾನಕ್ಕೆ ಇನ್ನು ಎರಡೇ ವಾರ ಬಾಕಿ. ಬೇಸಿಗೆ ಬಿಸಿಲ ಝಳದ ಜತೆಗೆ ಚುನಾವಣಾ ಪ್ರಚಾರವೂ ಕಾವೇರುತ್ತಿದೆ. ಅಧಿಕಾರಿಗಳ ಕಾರ್ಯಾಚರಣೆಯೂ ತೀವ್ರಗೊಂಡಿದೆ.
ಹಿಂದೂಗಳ ಪಾಲಿನ ಹೊಸ ಸಂವತ್ಸರ ಯುಗಾದಿ ಹಿನ್ನೆಲೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರಕ್ಕೂ ಬಿಡುವು ನೀಡಿದ್ದರು. ಅಘೋಷಿತ ರಜೆ ಮುಗಿದಾದ ಮೇಲೆ ಅಭ್ಯರ್ಥಿಗಳೂ ಪ್ರವಾಸ ಕಾರ್ಯಕ್ರಮದ ಪಟ್ಟಿ ಬಿಡುಗಡೆಗೊಳಿಸಿ, ಮತ್ತೆ ಮತಯಾಚನೆಗೆ ಇಳಿದಿದ್ದಾರೆ.
ಪ್ರಚಾರಕ್ಕೀಗ ಡಿಕೆಶಿ: ಸಹೋದರ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ವಿವಿಧ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗುರುವಾರದಿಂದ ಸ್ವಕ್ಷೇತ್ರ ಕನಕಪುರದಲ್ಲಿ ಎರಡು ದಿನ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.  ಅಭ್ಯರ್ಥಿ ಸುರೇಶ್ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರೊಂದಿಗೆ ಅಲ್ಲಲ್ಲಿ ಪ್ರವಾಸ ಕೈಗೊಂಡು ಮತಯಾಚನೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ರಾಮನಗರದ ಮುಸ್ಲಿಂ ವಾರ್ಡ್‌ಗಳಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಎಸ್.ಎಂ. ಕೃಷ್ಣ ಸಹಿತ ಹಲವರು ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಎಚ್‌ಡಿಕೆ ಭೇಟಿ: ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಪ್ರಭಾಕರರೆಡ್ಡಿ ಜತೆಗೂ ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇವರ ಹೊರತಾಗಿ ಸ್ಟಾರ್ ಪ್ರಚಾರಕರು ಇತ್ತ ಸುಳಿದಿಲ್ಲ. ಚಿಕ್ಕಬಳ್ಳಾಪುರಕ್ಕೆ ತೆರಳಲು ಬೆಂಬಲಿಗರ ಅನುಮತಿ ಕೋರಲು ಕರೆದಿದ್ದ ಸಭೆಯಲ್ಲಿ ಕುಮಾರಸ್ವಾಮಿ ಅವರು ರಾಮನಗರದಲ್ಲಿ ತಮ್ಮ ಅನುಪಸ್ಥಿತಿಯನ್ನು ಪುತ್ರ ನಿಖಿಲ್‌ಗೌಡ ತುಂಬಲಿದ್ದಾರೆ ಎಂದಿದ್ದರು. ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಹಿತ ಇದುವರೆಗೆ ನಿಖಿಲ್ ಆಗಮನವಾಗಿಲ್ಲ. ದೇವೇಗೌಡ, ಕುಮಾರಸ್ವಾಮಿ ಜತೆಗೆ ಬಂದು ಹೋಗಿದ್ದನ್ನು ಬಿಟ್ಟರೆ ಪ್ರಭಾಕರರೆಡ್ಡಿಯವರೂ ರಾಮನಗರ ಜಿಲ್ಲೆಯತ್ತ ತಲೆ ಹಾಕಿಯೇ ಇಲ್ಲ. ಅಭ್ಯರ್ಥಿ ಬರುವಿಕೆಗಾಗಿ ಕಾಯುತ್ತಿರುವ ಇಲ್ಲಿನ ಪ್ರಮುಖ ನಾಯಕರು, ಕಾರ್ಯಕರ್ತರು ಇನ್ನೂ ಮತದಾರರ ಮನೆಗೆ ಬಾಗಿಲಿಗೆ ತೆರಳಿಲ್ಲ.
ಸಂತೋಷ್ ಭಾಗಿ: ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ರಾಮನಗರದಲ್ಲಿ ಸ್ಥಾನೀಯ ಸಮಿತಿ ಪ್ರಮುಖರ ಸಭೆಯಲ್ಲಿ ಮಾತನಾಡಿದ್ದಾರೆ. ಅಭ್ಯರ್ಥಿ ಮುನಿರಾಜುಗೌಡ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿದ್ದು, ಗುರುವಾರದಿಂದ ಮತಯಾಚನೆಗೆ ಹೊರಟಿದ್ದಾರೆ.  ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪಾಲ್ಗೊಂಡಿದ್ದರು. ಅದಾದ ನಂತರ ವಿವಿಧ ಸಭೆಗಳಲ್ಲಿ ಮಾಜಿ ಸಚಿವ ರಾಮಚಂದ್ರಗೌಡ, ಶಾಸಕ ಎಸ್.ಆರ್. ವಿಶ್ವನಾಥ್ ಕೂಡ ಪಾಲ್ಗೊಂಡಿದ್ದರು.
ಹಿರೇಮಠ್ ಆಸರೆ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಪರವಾಗಿ ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಕೂಡ ಕನಕಪುರ, ಚನ್ನಪಟ್ಟಣ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ್ದಾರೆ. ಆಮ್ ಆದ್ಮಿ ಪ್ರಚಾರ ಸಭೆಗಳುದ್ದಕ್ಕೂ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆದಿದೆ. ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಪ್ರವಾಸದ ವೇಳೆ ಅವರ ವಾಹನದ ಮೇಲೆ ಕನಕಪುರ ತಾಲೂಕು ವ್ಯಾಪ್ತಿಯಲ್ಲಿ ಕಲ್ಲು ತೂರಾಟವೂ ನಡೆದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement