ನರೇಗಾ ಯೋಜನೆ ಅನುಷ್ಠಾನಕ್ಕೆಮಾರ್ಗಸೂಚಿ
ರಾಮನಗರ: ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳು ಮಾರ್ಗಸೂಚಿ ಹೊರಡಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದ್ದಾರೆ.
ಮಾರ್ಗಸೂಚಿಯಂತೆ ನರೇಗಾ ಅನುಷ್ಟಾನದಲ್ಲಿ ಜಾಬ್ ಕಾರ್ಡುದಾರರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದಾಗ ಪ್ರಗತಿಯಲ್ಲಿರುವ ಕೆಲಸಗಳಿಗೆ ಉದ್ಯೋಗ ನೀಡುವುದು, ಸಾಧ್ಯವಿಲ್ಲದಿದ್ದರೆ ಈಗಾಗಲೇ ಅನುಮತಿ ಪಡೆದಿರುವ ಕೆಲಸಗಳಿಗೆ ಉದ್ಯೋಗ ಒದಗಿಸಬಹುದು. ಆದರೆ, ಈ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಿ, ಅನುಮತಿ ಪಡೆಯಬೇಕು.
ಕೆಲಸಗಳು ಪ್ರಗತಿಯಲ್ಲಿದ್ದಾಗ ಹೊಸ ಕೆಲಸಗಳನ್ನು ಪ್ರಾರಂಭಿಸುವಂತಿಲ್ಲ. ಅನುಮತಿ ಪಡೆಯದ ಯಾವುದೇ ಕೆಲಸಗಳು ಇಲ್ಲದಿದ್ದಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಸಕ್ಷಮ ಪ್ರಾಧಿಕಾರಿಯು ಪ್ರಗತಿಯಲ್ಲಿರುವ ಕೆಲಸದ ಜಾಬ್ ಕಾರ್ಡ್ದಾರರಿಗೆ ಉದ್ಯೋಗ ಒದಗಿಸಲು ಸಾಧ್ಯವಾಗದ ಕಾರಣ ಹೊಸ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದು ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಈ ಸಂಬಂಧ ಮಾರ್ಗಸೂಚಿಗಳನ್ನು ಪಾಲಿಸುವುದು ಹಾಗೂ ಹೊಸ ಕೆಲಸ ಪ್ರಾರಂಭಿಸುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ.