ಪ್ರತ್ಯೇಕ ಪ್ರಣಾಳಿಕೆ ನೀಡಿದ ಬಚ್ಚೇಗೌಡ
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಕುಡಿಯುವ ನೀರು, ಕೃಷಿ, ನೀರಾವರಿ, ವರ್ತುಲ ರೈಲು, ರಾಷ್ಟ್ರೀಯ ಹೆದ್ದಾರಿ, ಒಣ ಬಂದರು, ನಗರಾಭಿವೃದ್ಧಿ, ಉನ್ನತ ಶಿಕ್ಷಣ, ನಿರಂತರ ವಿದ್ಯುತ್, ಕೈಗಾರಿಕೆ, ಮಹಿಳಾ ಸಬಲೀಕರಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಹತ್ತಾರು ಯೋಜನೆಗಳನ್ನು ಜಾರಿಗೆ ತರುವುದಾಗಿ ಬಚ್ಚೇಗೌಡರು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಚ್ಚೇಗೌಡ, ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಅಭ್ಯರ್ಥಿ ವೀರಪ್ಪ ಮೊಯ್ಲಿ ಕೇವಲ ಸುಳ್ಳಿನ ಕಂತೆಯಲ್ಲಿಯೇ ಅಭಿವೃದ್ಧಿಯನ್ನು ದೂರದ ಮಾತು ಮಾಡಿದ್ದಾರೆ. ಜಾತಿ ರಾಜಕೀಯವನ್ನು ಬಂಡವಾಳವಾಗಿಸಿಕೊಂಡು ಜನರಿಗೆ ಅಭಿವೃದ್ಧಿಯನ್ನು ಗಗನ ಕುಸುಮ ಮಾಡಲಾಗಿದೆ. ಕುಡಿಯುವ ನೀರು ಕೊಡುವ ಯೋಜನೆಯಲ್ಲಿಯೂ ಕೇವಲ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನಿಂದ ವರ್ತುಲ ರೈಲು ಆರಂಭಿಸುವ ಕುರಿತಂತೆ ಪ್ರಯತ್ನ ಮಾಡುತ್ತೇನೆ. ಪುಷ್ಪೋದ್ಯಮಕ್ಕೆ ಹೆಸರಾಗಿರುವ ಚಿಕ್ಕಬಳ್ಳಾಪುರದಲ್ಲಿ ಕೇಂದ್ರೀಯ ಪುಷ್ಪ ಮಂಡಳಿ ಸ್ಥಾಪನೆ ಮಾಡುವ ಅಗತ್ಯವಿದೆ. ಇದರ ಜತೆಗೆ ಪಶು ಆಹಾರ ಹಾಗೂ ಹಾಲು ಉತ್ಪಾದನೆ ಘಟಕ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.