ಬಾಂಬೆ ರೇಯಾನ್ ಯೂನಿಟ್ 9 ಕೆಲಸ ಸ್ಥಗಿತ
ದೊಡ್ಡಬಳ್ಳಾಪುರ: ಇಲ್ಲಿನ ಅಪೆರಲ್ ಪಾರ್ಕ್‌ನಲ್ಲಿರುವ ಬಾಂಬೆ ರೇಯಾನ್ ಯೂನಿಟ್ 9 (ಅಪೇಕ್ಷ) ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ಕೆಲಸ ಸ್ಥಗಿತಗೊಳಿಸಿದ ಪರಿಣಾಮ 700ಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.
ಯುಗಾದಿ ಹಬ್ಬದ 2 ದಿನಗಳ ರಜೆ ನಂತರ ಕೆಲಸಕ್ಕೆ ಬಂದ ಕಾರ್ಮಿಕರಿಗೆ ದಿಢೀರನೇ ಕೈಗಾರಿಕೆ ಸ್ಥಗಿತಗೊಂಡಿರುವ ಕುರಿತು ಆಡಳಿತ ಮಂಡಲಿಯನ್ನು ಪ್ರಶ್ನಿಸಿದ್ದಾರೆ. ಉತ್ಪಾದನಾ ಬೇಡಿಕೆ ಇಲ್ಲದಾಗಿದ್ದರಿಂದ ಕೆಲಸ ಸ್ಥಗಿತಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕರು, ಯೂನಿಟ್ 7ರಲ್ಲಿ ಕೆಲಸ ಮಾಡಲು ಆಡಳಿತ ಮಂಡಳಿ ಕಾರ್ಮಿಕರ ಮೇಲೆ ಒತ್ತಡ ಹೇರಿದೆ. ಈ ಹಿಂದೆ ಅಪೇಕ್ಷಾ ಗಾರ್ಮೆಂಟ್ಸ್ ಬಾಂಬೆ ರೇಯಾನ್ ಯೂನಿಟ್‌ಗೆ ವಿಲೀನಗೊಳಿಸಿದ ಪರಿಣಾಮ ಈ ಹಿಂದೆ ಕೂಡ ಹಲವು ತೊಂದರೆಗಳನ್ನು ಅನುಭವಿಸಿದ್ದೇವೆ. ಈಗ ಮತ್ತೆ ಅಲ್ಲಿಗೇ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ನಮ್ಮ ಬದುಕು ಬೀದಿಗೆ ಬಿದ್ದಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾರ್ಮಿಕರು 3 ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡಿ ಯೂನಿಟ್ 7ರಲ್ಲಿ ಕೆಲಸ ಮಾಡುತ್ತೇವೆ ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಆದರೆ ಕಾನೂನು ಪ್ರಕಾರ 1 ತಿಂಗಳ ವೇತನವನ್ನಷ್ಟೇ ನೀಡಬಹುದಾಗಿದೆ. 3 ತಿಂಗಳ ವೇತನ ನೀಡಲು ಕಾರ್ಖಾನೆ ಶಕ್ತವಾಗಿಲ್ಲ. ಹೀಗಾಗಿ 1 ತಿಂಗಳ ಸಂಬಳ ಕೊಟ್ಟು, ಕಾರ್ಮಿಕರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಎಚ್‌ಆರ್ ಸೌಮ್ಯ ಹೇಳಿದ್ದಾರೆ.