ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತ ಮಹತ್ವದ ಅರಿವು ಮೂಡಿಸಿ: ವೆಂಕಟೇಶ್

Rashmi Kasaragodu
Updated On : 3 Apr 2014, 1:18 am

ರಾಮನಗರ: ಯಾವುದೇ ಒಬ್ಬ ವ್ಯಕ್ತಿಯೂ ಮತದಾನದಿಂದ ವಂಚಿತರಾಗಬಾರದು. ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ವಿ. ವೆಂಕಟೇಶ್ ಕರೆ ನೀಡಿದರು.  
ನಗರದ ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ರಾಜ್ಯ ಚುನಾವಣಾ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ನಡೆದ ಮತದಾರರಲ್ಲಿ ಅರಿವು ಮೂಡಿಸುವ ಬೀದಿ ನಾಟಕ, ಕಲಾ ಜಾಥಾದ ರಾಜ್ಯ ಮಟ್ಟದ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನವು ಪರಿಚ್ಛೇದ 324 ಹಾಗೂ 326ರ ರೀತಿ ಜಾತ್ಯತೀತ, ಧರ್ಮಾತೀತವಾಗಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದೆ. 18 ವರ್ಷ ತುಂಬಿರುವವರು, ಬುಡಕಟ್ಟು ಜನರು, ಮಹಿಳೆಯರು, ಅಲೆಮಾರಿಗಳು ತಮ್ಮ ಸಂವಿಧಾನಬದ್ಧ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸರಳವಾಗಿ ಆಡುಭಾಷೆಯ ಮೂಲಕ ಅರಿವು ಮೂಡಿಸಬೇಕು ಎಂದರು.
ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ದೇಶದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ.
ತಮ್ಮ ಹಕ್ಕನ್ನು ಬಳಸಿಕೊಂಡು ಆಯ್ಕೆ ಮಾಡುವ ಅಭ್ಯರ್ಥಿಯು ದೇಶವನ್ನು ಮುನ್ನಡೆಸಬೇಕಿರುತ್ತದೆ.
ಮತದಾರರು ತಮ್ಮ ಜವಾಬ್ದಾರಿ ಅರಿತು ಮತ ಚಲಾಯಿಸಬೇಕು ಎಂದರು.  ಏ.17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಶೆ, ಆಮಿಷಗಳಿಗೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.  
ಏ.17ರಂದು ನಡೆಯುವ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ಆಗಬೇಕೆಂಬುದು ಆಯೋಗದ ಆಶಯವಾಗಿದೆ. ಈ ಸಂಬಂಧ ಮತದಾರರಿಗೆ ಮತದಾನದ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾರ್ತಾ ಇಲಾಖೆ ಅಧಿಕಾರಿ ಹಮೀದ್ ಖಾನ್ ತಿಳಿಸಿದರು.
ತರಬೇತಿ ಶಿಬಿರವು 3 ದಿನ ನಡೆಯಲಿದ್ದು, ಜೋಗುಲ ಸಿದ್ದರಾಜು ತರಬೇತಿ ನೀಡುವರು. ಇಲ್ಲಿ ತರಬೇತಿ ಪಡೆದ ಕಲಾ ತಂಡಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement