ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ರು. 3.63 ಲಕ್ಷ ಹಣ ಪತ್ತೆ
ಸೂಲಿಬೆಲೆ: ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರೊಂದರಲ್ಲಿ ಸೂಕ್ತ ದಾಖಲೆಗಳಿಲ್ಲದೆ ಇಟ್ಟಿದ್ದ ಹಣವನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ವಶಪಡಿಸಿಕೊಂಡು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಬುಧವಾರ ನಡೆದಿದೆ. ಕಸಬಾ ಫ್ಲೈಯಿಂಗ್ ಸ್ಕ್ವಾಡ್ ವೀರಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಗಸ್ತಿನಲ್ಲಿದ್ದಾಗ ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರಿನ ಬಗ್ಗೆ ಅನುಮಾನಗೊಂಡು ಕಾರನ್ನು ಪರಿಶೀಲನೆ ಮಾಡಲಾಯಿತು. ಈ ವೇಳೆ ಕಾರಿನ ಡಿಕ್ಕಿಯಲ್ಲಿ ರು.3.63 ಲಕ್ಷ ಪತ್ತೆಯಾಯಿತು. ಈ ಹಣದ ಬಗ್ಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಹೊಸಕೋಟೆ ಪೊಲೀಸರಿಗೆ ತಂಡ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾಣಾಧಿಕಾರಿ ಡಾ. ನಟರಾಜ್ ತಿಳಿಸಿದ್ದಾರೆ.