ಜೆಡಿಎಸ್, ಕಾಂಗ್ರೆಸ್ ಕಚೇರಿ ಯಾವುದು?
ಸು.ನಾ.ನಂದಕುಮಾರ್
ಚನ್ನಪಟ್ಟಣ: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಧಿಕೃತ ಕಚೇರಿ ಯಾವುದು....ಇಂತಹುದೊಂದು ಪ್ರಶ್ನೆ ಉಭಯ ಪಕ್ಷಗಳ ಕಾರ್ಯಕರ್ತರನ್ನು ಕಾಡುತ್ತಿದೆ.
ಶಾಸಕ ಯೋಗೇಶ್ವರ್, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಅವರವರ ಪಕ್ಷಗಳಿಗೆ ಮರಳಿದ ಬಳಿಕ ಆ ಪಕ್ಷಗಳ ಕಾರ್ಯಕರ್ತರಲ್ಲಿ ಇಂತಹ ಗೊಂದಲ ಮನೆಮಾಡಿದ್ದು, ಪಕ್ಷಕ್ಕೆ ಮರಳಿ ಅಧಿಕಾರ ವಹಿಸಿಕೊಂಡವರ ಅಧಿಕೃತ ನಿವಾಸವಾ.. ಇಲ್ಲ ಹಳೆಯ ಕಚೇರಿಯಾ ಎಂಬ ಜಿಜ್ಞಾಸೆ ಪಕ್ಷದ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.
ಜೆಡಿಎಸ್ ಕಚೇರಿ ಗೊಂದಲ: ಅನಿತಾಕುಮಾರಸ್ವಾಮಿ ಸ್ಪರ್ಧಿಸಿದಾಗಿನಿಂದ ತಾಲೂಕು ಜೆಡಿಎಸ್ ಕಚೇರಿಯನ್ನಾಗಿ ಕುವೆಂಪು ನಗರ 11ನೇ ಅಡ್ಡರಸ್ತೆಯ ಜೆಡಿಎಸ್ ಮುಖಂಡ ಮಾಕಳಿ ಮಹೇಶ್ ಮನೆಯನ್ನು ಬಳಸಿ ಕೊಳ್ಳಲಾಗುತ್ತಿತ್ತು. ಕಳೆದೊಂದು ವಾರದವರೆಗೆ ತಾಲೂಕು ಜೆಡಿಎಸ್ ಪಾಳಯ ಇದೇ ಅಧಿಕೃತ ಕಚೇರಿ ಎಂದು ತನ್ನೆಲ್ಲ ಕಾರ್ಯ ಚಟುವಟಿಕೆಯನ್ನು ಇಲ್ಲಿಂದಲೇನಿರ್ವಹಿಸುತ್ತಿತ್ತು.
ಮಾ.22 ರಂದು ಹಿಲ್ ವ್ಯೂ ರೆಸಾರ್ಟ್ನಲ್ಲಿ ಸಭೆ ನಡೆದ ಬಳಿಕ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಮಾಜಿ ಶಾಸಕ ಅಶ್ವತ್ಥ್ಗೆ ವಹಿಸಲಾಗಿದ್ದು, ಅವರ ಆಪ್ತ ವಲಯ ಕುವೆಂಪು ನಗರ 6 ನೇ ಅಡ್ಡರಸ್ತೆಯಲ್ಲಿರುವ ಅವರ ನಿವಾಸವೇ ಪಕ್ಷದ ಕಚೇರಿ ಎಂದು ಹೇಳುವ ಮೂಲಕ ಪಕ್ಷದ ಕಚೇರಿ ಯಾವುದು ಎಂಬ ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ.
ಕೈ ಕಚೇರಿ ಯಾವುದು: ಇಂತಹುದೇ ಗೊಂದಲ ತಾಲೂಕು ಕಾಂಗ್ರೆಸ್ ಪಾಳಯದಲ್ಲೂ ಕಾಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ತಾಲೂಕು ಕಾಂಗ್ರೆಸ್ ಕಚೇರಿ ಯಾವುದು ಎಂಬ ಜಿಜ್ಞಾಸೆ ಪಕ್ಷದ ಮುಖಂಡರನ್ನು ಬಹುವಾಗಿ ಕಾಡಲಾರಂಭಿಸಿದೆ. ಪಟ್ಟಣದ ಇದೇ ಅಡ್ಡರಸ್ತೆಯ ಬಳಿ ಮಾಡಲಾಗಿದ್ದ ತಾಲೂಕು ಕಾಂಗ್ರೆಸ್ ಕಚೇರಿಯನ್ನು ಮುಚ್ಚಲಾಗಿದ್ದು, ಇತ್ತೀಚಿಗೆ 7 ನೇ ಅಡ್ಡರಸ್ತೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮಾಡಿದ್ದ ಸಂಸದರ ಕಚೇರಿಗೆ ಸ್ಥಳಾಂತರ ಗೊಂಡಿದ್ದ ತಾಲೂಕು ಕಾಂಗ್ರೆಸ್ ಅಲ್ಲಿಂದಲ್ಲೇ ತನ್ನೆಲ್ಲ ಚಟವಟಿಕೆ ನಡೆಸುತ್ತಿತ್ತು.
ಇದೀಗ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಚುನಾವಣೆಯ ಸಂಪೂರ್ಣ ಉಸ್ತುವಾರಿ ಅವರ ಹೆಗಲ ಮೇಲೆ ಹೊರಿಸಲಾಗಿದೆ. ಯೋಗೇಶ್ವರ್ ಕಾಂಗ್ರೆಸ್ಗೆ ಸೇರ್ಪಡೆಗೊಂಡ ನಂತರ ಇನ್ನೂ ತಾಲೂಕು ಕಾಂಗ್ರೆಸ್ ಕಚೇರಿಗೆ ಹೋಗಿಲ್ಲ. ತಾಲೂಕಿನ ರಾಜಕೀಯ ಚಟುವಟಿಕೆಗಳನ್ನು ತಮ್ಮ ನಿವಾಸದಿಂದಲೇ ನಿರ್ವಹಿಸುತ್ತಿರುವ ಯೋಗೇಶ್ವರ್ ತಮ್ಮ 5ನೇ ಕ್ರಾಸ್ ನಿವಾಸವನ್ನೇ ಪಕ್ಷದ ಕಚೇರಿಯಾಗಿ ಮುಂದುವರೆಸಲಿದ್ದಾರೆ.
ಹಿಂದಿನಿಂದಲೂ ಯೋಗೇಶ್ವರ್ ಯಾವ ಪಕ್ಷಕ್ಕೆ ಹೋಗಲಿ ತಮ್ಮ ನಿವಾಸವೇ ಪಕ್ಷದ ಕಚೇರಿಯಾಗಿ ಪರಿವರ್ತಿಸಿ ಕೊಂಡು ಬಂದಿದ್ದಾರೆ. ಈ ಬಾರಿಯ ಚುನಾವಣೆಯನ್ನು ಇದೇ ಕಚೇರಿಯಿಂದ ನಿರ್ವಹಿಸಲು ಮುಂದಾಗಿದ್ದು ಹಾಗದರೆ ಕಾಂಗ್ರೆಸ್ ಕಚೇರಿ ಯಾವುದು ಎಂಬ ಗೊಂದಲ ಮತ್ತೆ ಜೀವಂತಗೊಂಡಿದೆ.
ಪಕ್ಷದ ವರಿಷ್ಠರು ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ಗೆ ಚುನಾವಣೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿದ್ದಾರೆ. ಹಾಗಾಗಿ 6 ನೇ ಕ್ರಾಸ್ನಲ್ಲಿರುವ ಅವರ ನಿವಾಸವೇ ಪಕ್ಷದ ಕಚೇರಿ, ಈ ಚುನಾವಣೆಯ ಎಲ್ಲಾ ಕೆಲಸಗಳನ್ನು ನಾವು ಅಲ್ಲಿಂದಲೇ ನಿರ್ವಹಿಸುತ್ತೇವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ.
ಟಿ ಎನ್.ರಾಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ
ಪಟ್ಟಣದ 5ನೇ ಅಡ್ಡರಸ್ತೆಯ ಸಮೀಪ ಮಾಡಿದ್ದ ಕಚೇರಿಯನ್ನು ಕಾರಣಾಂತರಗಳಿಂದ ಮುಚ್ಚಲಾಗಿದೆ. ಸದ್ಯಕ್ಕೆ ಡಿಕೆಎಸ್ ಟ್ರಸ್ಟ್ಗೆ ಇಲ್ಲಿನ 7 ನೇ ಕ್ರಾಸ್ನಲ್ಲಿ ಪಡೆದಿರುವ ಕಚೇರಿಯಲ್ಲಿ ಪಕ್ಷದ ಕಾರ್ಯಗಳು ನಡೆಯುತ್ತಿದ್ದು, ತಾಲೂಕು ಕಾಂಗ್ರೆಸ್ನ ಅಧಿಕೃತ ಕಚೇರಿಯಾವುದು ಎಂಬುದನ್ನು ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕರಾದ ಸಿ.ಪಿ.ಯೋಗೇಶ್ವರ್ ನಿರ್ಧರಿಸುತ್ತಾರೆ.
ಟಿ ಪಿ.ಡಿ.ರಾಜು, ತಾ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ