ಡಿ.ಕೆ. ಸುರೇಶ್ ಪ್ರಚಾರ 7 ರಂದು
ಮಾಗಡಿ: ಏ.7 ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್, ಪಕ್ಷ ನಾಯಕರೊಂದಿಗೆ ಮಾಗಡಿ ಕ್ಷೇತ್ರದ ಪಂಚಾಯ್ತಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ತಿಳಿಸಿದರು.
ಅವರು ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜವಾಬ್ದಾರಿಯಿಂದ ಚುನಾವಣೆ ಎದುರಿಸಲು ಪಂಚಾಯ್ತಿ ವಾರು ಕಾರ್ಯಕರ್ತರು ಸಂಘಟನೆಗೆ ಸನ್ನದ್ಧರಾಗಬೇಕಿದೆ.ಭಿನ್ನಾಭಿಪ್ರಾಯ ಪ್ರತಿಷ್ಠೆ ಬೇಜವಾಬ್ದಾರಿ ಬೇಡ, ಜವಾಬ್ದಾರಿಯಿಂದ ಸಮರ್ಪಕವಾಗಿ ಚುನಾವಣೆ ಎದುರಿಸಬೇಕು. ತಾಲೂಕಿನ ಸ್ವಾಭಿಮಾನದ ಪ್ರಶ್ನೆಯಾಗಿದೆ. ಈ ಬಾರಿಯೂ ಸಹ ಸಂಸದ ಡಿ.ಕೆ. ಸುರೇಶ್ ಅವರಿಗೆ ಚುನಾವಣೆಯಲ್ಲಿ ಹೆಚ್ಚಿನ ಮತಕೊಡಿಸಲು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು.
ಸೇರ್ಪಡೆ: ಇದೇ ವೇಳೆ ಹರ್ತಿ ಪರಮೇಶ್, ರಂಗನಾಥ್, ನರಸಿಂಹಮೂರ್ತಿ ಇತರರು ಎ.ಮಂಜು ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.