ಬಿಜೆಪಿಗೆ ಮತ ನೀಡಿ: ಮುನಿರಾಜುಗೌಡ ಮನವಿ
ಮಾಗಡಿ: ನನ್ನನ್ನು ಆರಿಸಿ ಆಶೀರ್ವದಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ. ಮುನಿರಾಜುಗೌಡ ಮನವಿ ಮಾಡಿದರು. ಅವರು ಮಾಗಡಿ ಪಟ್ಟಣದ ಕಲ್ಯಗೇಟ್ ಶ್ರೀವರಸಿದ್ಧಿ ವಿನಾಯಕಸ್ವಾಮಿ ದೇವಾಲಯಕ್ಕೆ ತೆರಳಿ ವಿನಾಯಕಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ರೋಡ್ ಶೋ ನಲ್ಲಿ ಮಾತನಾಡಿ, ದೇಶದ ಐಕ್ಯತೆ, ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲು ಈ ಬಾರಿ ನರೇಂದ್ರಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ನನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರಲ್ಲದೆ ಈ ಬಾರಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದರೆ ಬರಡು ಭೂಮಿ ಪ್ರದೇಶಗಳಿಗೆ ಶಾಶ್ವತವಾದ ನೀರಾವರಿ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಗುಡಿ ಕೈಗಾರಿಕೆಗಾಗಿ ವಿಶೇಷ ತರಬೇತಿ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ. ನಾಗರಾಜು ಮಾತನಾಡಿ ದೇಶದ ಭವಿಷ್ಯದ ಹಿತಾ ದೃಷ್ಟಿಯಿಂದ ಈ ಬಾರಿ ಲೋಕಸಭಾ ಚುನವಾಣೆ ಅತ್ಯಂತ ಮಹತ್ವಪೂರ್ಣವಾಗಿದೆ. ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿಸೋಣ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಅಮೂಲ್ಯವಾದ ಮತ ಬಿಜೆಪಿ ಅಭ್ಯರ್ಥಿ ಪಿ. ಮುನಿರಾಜು ಗೌಡರಿಗೆ ನೀಡಿ ಆಶೀರ್ವಧಿಸುವಂತೆ ಮನವಿ ಮಾಡಿಕೊಂಡರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಯದೇವ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಪ್ರಸಾದ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಡಾ.ನವೀನ್, ಎಂ.ಟಿ.ಶಿವಣ್ಣ, ಜಯರಾಮು, ನಿಜಗುಣ ಶಿವಯೋಗಿ, ಟಿ.ಆರ್. ದಯಾನಂದ್, ಶಂಕರ್, ಮೂರ್ತಿ ನಾಗರಾಜು, ಸುನೀಲ್, ಬಾಲಾಜಿ, ವಿವೇಕ್, ರಾಘೇವಂದ್ರ ಜಯಚಂದ್ರ, ರವಿಕುಮಾರ್, ಕುಮಾರ್ ಇತರರು ಇದ್ದರು.
ಮುಂದುವರಿದ ಅನಿರ್ದಿಷ್ಟಾವಧಿ ನಿರಶನ
ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಬುಧವಾರ ಪ್ರಾರಂಭಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂರನೇ ದಿನವಾದ ಶುಕ್ರವಾರವೂ ಮುಂದುವರೆಯಿತು. ಹೋರಾಟಕ್ಕೆ ಇಳಿದ ಮೂವತ್ತು ನೌಕರರ ಅಮಾನತು ಹಿಂತೆಗೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಡಳಿತ ಮಂಡಳಿ ವಿರುದ್ಧ ನೌಕರರು ನಿರಶನ ಮುಂದುವರೆಸಿದ್ದಾರೆ. ಪದಾಧಿಕಾರಿಗಳ ಜತೆಗೆ ಕಾರ್ಮಿಕರೂ ಈಗ ಉಪವಾಸಕ್ಕೆ ಇಳಿದಿದ್ದಾರೆ. ಈ ಹಿಂದೆ ಆಡಳಿತ ಮಂಡಳಿಯು ಕಾರ್ಮಿಕರ ಅಸಹಾಕಾರ ಧೋರಣೆ ಮತ್ತು ಅಶಿಸ್ತಿನ ಹಿನ್ನೆಲೆಯಲ್ಲಿ ಬೀಗಮುದ್ರೆ ಘೋಷಿಸಿತ್ತು. ತ್ರಿಪಕ್ಷೀಯ ಮಾತುಕತೆ ಬಳಿಕ ಬೀಗಮುದ್ರೆ ನಿರ್ಧಾರವನ್ನು ಹಿಂಪಡೆದಿತ್ತಾದರೂ 30 ಮಂದಿಗೆ ಅಮಾನತು ಶಿಕ್ಷೆ ವಿಧಿಸಿತ್ತು.