ಮತದಾರರ ಜಾಗೃತಿಗೆ ವಿಶಿಷ್ಟ ಕಾರ್ಯಕ್ರಮ
ಕ.ಪ್ರ.ವಾರ್ತೆ ರಾಮನಗರ ಏ.4
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಪ್ರೇರೇಪಿಸಿ ಮತದಾನ ಪ್ರಮಾಣವನ್ನು ಪ್ರತಿಶತ ನೂರರಷ್ಟು ತಲುಪಿಸುವ ಗುರಿಯೊಂದಿಗೆ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದೆ.
ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಮತದಾನ ದಿನವನ್ನು ಪ್ರಜಾಪ್ರಭುತ್ವದ ಹಬ್ಬವಾಗಿ ಆಚರಿಸುವಂತಹ ವಾತಾವರಣವನ್ನು ಈ ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಸಂಕಲ್ಪ ತೊಡಲಾಯಿತು.
ಅಗ್ರಸ್ಥಾನದ ಗುರಿ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾದ ಪೈಕಿ ರಾಮನಗರ 2ನೇ ಸ್ಥಾನದಲ್ಲಿತ್ತು. ಈ ಬಾರಿ ಶೇಕಡ 100ರಷ್ಟು ಮತದಾನದ ಮೂಲಕ ಅಗ್ರಸ್ಥಾನಕ್ಕೇರಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ವೆಂಕಟೇಶ್ ಕರೆ ನೀಡಿದರು.
ಮತದಾರರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಗ್ರಾ.ಪಂ., ಅಂಗನವಾಡಿ ಸಿಬ್ಬಂದಿ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರನ್ನು ಬಳಸಿಕೊಂಡು ಜಾಥಾ ನಡೆಸಬೇಕು. ಮತದಾನಕ್ಕೆ ಪ್ರೇರೇಪಿಸುವ ಬ್ಯಾಡ್ಜ್ಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಕರಪತ್ರಗಳನ್ನೂ ಹಂಚಬೇಕು ಎಂದರು.
ಮಾನವ ಸರಪಳಿ : ಜಾನಪದ ಲೋಕದಿಂದ ಕೆಂಗಲ್ವರೆಗೆ ಏ.9ರಂದು ಮಾನವ ಸರಪಳಿ ಜಾಥಾವನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸುವರು. ಅಂದು ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
ಏ.10ರಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪುಷ್ಪ ರಂಗೋಲಿ ಸ್ಪರ್ಧೆ, ಅಶಕ್ತರಿಗೆ ಕವಿಗೋಷ್ಠಿ ಆಯೋಜಿಸಲಾಗಿದೆ. ಆಯುರ್ವೇದ ವೈದ್ಯ ಪದ್ಧತಿಯ ಮೂಲಕವೂ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಕಲ್ಯಾಣ ಮಂಟಪದಲ್ಲೂ: ವಿವಾಹ ಕಾರ್ಯಕ್ರಮಗಳಲ್ಲೂ ಸಂಬಂಧಿಸಿದವರ ಅನುಮತಿ ಪಡೆದು, ಮತದಾನ ಕುರಿತು ಜಾಗೃತಿ ಮತ್ತು ಪ್ರೇರೇಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಬ್ಬ, ಜಾತ್ರೆಗಳಲ್ಲೂ ಕಾರ್ಯಕ್ರಮ ಸ್ಥಳೀಯ ಮಟ್ಟದ ಅಧಿಕಾರಿಗಳು, ಸಿಬ್ಬಂದಿಯಿಂದ ಕಾರ್ಯಕ್ರಮ ನಡೆಯಲಿದೆ ಎಂದರು.
ಏ.10ರಂದು ಸಮುದಾಯದ ಸಹಭಾಗಿತ್ವ ಕಾರ್ಯಕ್ರಮದಲ್ಲಿ 1ರಿಂದ 7ನೇ ತರಗತಿ ವರೆಗಿನ ಮಕ್ಕಳ ವಾರ್ಷಿಕ ವರದಿ ನೀಡುವ ಸಂದರ್ಭದಲ್ಲಿ ಮಕ್ಕಳ ತಂದೆ-ತಾಯಿ, ಪೋಷಕರುಗಳಿಗೆ ಮತದಾನ ಮಾಡುವಂತೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಗುರುತಿಸುವಿಕೆ: ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿರುವ ಜಿಲ್ಲೆಯ 33 ಮತಗಟ್ಟೆಗಳನ್ನು ಗುರುತಿಸಿದ್ದು, ಅಲ್ಲಿ ಬೀದಿ ನಾಟಕ, ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಮುಂದಾಗಿದ್ದೇವೆ ಎಂದು ವೆಂಕಟೇಶ್ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗಳ ವತಿಯಿಂದ ಇದುವರೆಗೂ ಸ್ವೀಪ್ ಚಟುವಟಿಕೆಗಳಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಮಾಹಿತಿ ವಿವರಿಸಿದರು.
ಜಿ.ಪಂ. ಸಿಪಿಒ ದುನುಷ್, ಡಿಡಿಪಿಐ ಪ್ರಹ್ಲಾದ್ ಗೌಡ, ಡಿಎಚ್ಒ ಡಾ.ರಘುನಾಥ್, ನಗರಸಭೆ ಆಯುಕ್ತ ಯಶವಂತ್, ಜಿಲ್ಲಾ ವಾರ್ತಾಧಿಕಾರಿ ಹಮೀದ್ ಖಾನ್ ಮತ್ತಿತರರಿದ್ದರು.
ನಗರದಲ್ಲಿ ಪಂಜಿನ ಮೆರವಣಿಗೆ
ರಾಮನಗರ: ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಪಂಜಿನ ಮೆರವಣಿಗೆ ಜಾಥಾಕ್ಕೆ ಜಿ.ಪಂ. ಭವನದ ಆವರಣದಲ್ಲಿ ಶುಕ್ರವಾರ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ವಿ. ವೆಂಕಟೇಶ್ ಚಾಲನೆ ನೀಡಿದರು. ಈ ಜಾಥಾವು ಲೋಕಸಭೆ ಚುನಾವಣೆಯ ಮತದಾನದ ದಿನವಾದ ಏ.17ರವರೆಗೆ ಜಿಲ್ಲಾದ್ಯಂತ ಎಲ್ಲ ನಾಲ್ಕೂ ತಾಲೂಕುಗಳ ಗ್ರಾ.ಪಂ. ಕೇಂದ್ರ ಸ್ಥಾನಗಳಿಗೆ ತೆರಳಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಿದೆ.