ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಕ್ಷಮೆ ಕೇಳಲಿ
ದೊಡ್ಡಬಳ್ಳಾಪುರ: ಬೆಳಗಾವಿ ಅಧಿವೇಶನ ವೇಳೆ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಿ ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಮದ್ಯ ಸೇವಿಸಿ ಸಾವನ್ನಪ್ಪಿದ್ದ ಎಂದು ಹೇಳಿರುವ ಸಿಎಂ ಸಿದ್ಧರಾಮಯ್ಯ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘ, ಕೂಡಲೇ ಮುಖ್ಯಮಂತ್ರಿ ರಾಜ್ಯದ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಶುಕ್ರವಾರ ಮಧ್ಯಾಹ್ನ ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ರಾಜ್ಯ ರೈತ ಸಂಘದ ಮುಖಂಡರು, ಸಿಎಂ ಹೇಳಿಕೆಯಿಂದ ರಾಜ್ಯದ ರೈತ ಸಮುದಾಯಕ್ಕೆ ಆಘಾತವಾಗಿದೆ. ಇದು ರೈತರಿಗೆ ಮತ್ತು ರೈತರ ಹೋರಾಟಕ್ಕೆ ಮಾಡಿರುವ ಅವಮಾನ. ಘಟನೆ ನಡೆದು ಹಲವು ತಿಂಗಳುಗಳೇ ಕಳೆದಿರುವಾಗ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹುಂಬತನ ಮೆರೆದಿರುವುದು ಸಿದ್ಧರಾಮಯ್ಯ ಘನತೆಗೆ ತಕ್ಕುದಲ್ಲ. ತನ್ನ ಸ್ಥಾನದ ಘನತೆ ಅರಿತು ಅವರು ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಮುಖಂಡರಾದ ಸುಲೋಚನಮ್ಮ, ಪ್ರಸನ್ನ ನಾಗಸಂದ್ರ ಮತ್ತಿತರರು ಮಾತನಾಡಿ ರಾಜ್ಯದ 25 ಲಕ್ಷ ಕಬ್ಬು ಬೆಳೆಗಾರರನ್ನು ಕಡೆಗಣಿಸಿ ಕೇವಲ 25 ಸಕ್ಕರೆ ಕಾರ್ಖಾನೆ ಮಾಲೀಕರನ್ನು ತೃಪ್ತಿಪಡಿಸಿರುವ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ತಾನೇ ಘೋಷಿಸಿದ ಪರಿಹಾರದ ಹಣವನ್ನು ತಲುಪಿಸಿ ಕುಟುಂಬದ ಕ್ಷಮೆಯಾಚಿಸಬೇಕು ಎಂದರು.