31ನೇ ವರ್ಷದ ಶನೈಶ್ವರಸ್ವಾಮಿ ಕರಗ
ಕನಕಪುರ: ಕನಕಪುರ ಹೊರ ವಲಯದ ಬೂದಿಗುಪ್ಪೆ ಗೇಟ್ ಬಳಿ ಇರುವ ಶನೈಶ್ವರಸ್ವಾಮಿ 31ನೇ ವರ್ಷದ ಕರಗ ಮಹೋತ್ಸವ ನಡೆಯಿತು. ಶನೈಶ್ವರಸ್ವಾಮಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.
ಬ್ರಾಹ್ಮೀ ಮಹೂರ್ತದಲ್ಲಿ ಗಣಪತಿ ಹೋಮ,ನವಗ್ರಹ ಹೋಮ, ಮಹಾರುದ್ರ ಹೋಮ, ಉದಕ ಶಾಂತಿ ನಡೆಸಲಾಯಿತು. ಬೆಂಗಳೂರಿನ ಪ್ರಸಿದ್ಧ ಹರಿಕಥಾ ವಿದ್ವಾಂಸ ಭೋಜಣ್ಣರಿಂದ ಶನಿಪ್ರಭಾವ ಅಥವಾ ರಾಜಾವಿಕ್ರಮ ಕಥಾಕಾಲಕ್ಷೇಪ ನಡೆಯಿತು.
ದೇವಾಲಯದ ಮುಖ್ಯ ಅರ್ಚಕ ಶಿವಲಿಂಗಯ್ಯ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಮುಖಂಡರಾದ ಮಹದೇವ ನಾಯಕ್, ಪ್ರೇಮಾನಂದ್, ಲೋಕೇಶ್, ವೆಂಕಟೇಶ್,ಬೂದಿಗುಪ್ಪೆಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.