ಅತ್ಯಾಚಾರ ಆರೋಪಿ ನ್ಯಾಯಾಂಗ ಬಂಧನಕ್ಕೆ
ರಾಮನಗರ: ತಾಲೂಕಿನ ತಾಯಪ್ಪನದೊಡ್ಡಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಸಂಬಂಧ ದೂರಿನ ಹಿನ್ನೆಲೆಯಲ್ಲಿ ಆ ಗ್ರಾಮದ ಯುವಕ ಮುತ್ತು ಎಂಬಾತನನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಬಿಡದಿ ಪೊಲೀಸರು ಆರೋಪಿಯನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬದ ಏಳು ಮಂದಿ ಬೆಂಗಳೂರಿನ ಆತ್ಮಹತ್ಯೆ ಬೆದರಿಕೆ ಒಡ್ಡಿ ಪ್ರತಿಭಟನೆ ನಡೆಸಿದ್ದರು. ಕಡೆಗೂ ಒತ್ತಡಕ್ಕೆ ಮಣಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯು 2013ರ ನ.10ರಂದು ಒಬ್ಬ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ಏ.1 ರಂದು ಆ ಯುವತಿಯ ಸಹೋದರಿ ಮೇಲೂ ಅತ್ಯಾಚಾರ ಯತ್ನ ನಡೆಸಿದ್ದನು. ಈ ವಿರುದ್ಧ ಕುಟುಂಬದವರು ದೂರು ಸಲ್ಲಿಸಿದ್ದರು.
ಕಾಂಗ್ರೆಸ್ ಪ್ರಾಕೇಜ್ಗಾಗಿ
ಸಾಹಿತಿಗಳ ಮತಯಾಚನೆ
ರಾಮನಗರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಸಹಿತ ಕೆಲ ಸಾಹಿತಿಗಳು ಕಾಂಗ್ರೆಸ್ನಿಂದ ಸಿಗುವ ಪ್ಯಾಕೇಜ್ ಫಲಾನುಭವಿಗಳಾಗಲು ಆ ಪಕ್ಷದ ಪರ ಮತಯಾಚನೆಗೆ ಇಳಿದಿದ್ದಾರೆ ಎಂದು ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಆರೋಪಿಸಿದರು.
ಸರ್ಕಾರ ರೂಪಿಸಿರುವ ಸಮಾಜ ಒಡೆಯುವ ಯೋಜನೆಗಳು, ಉಗ್ರ ಮದನಿ ಪರ ಕೇರಳ ಸಿಎಂ ಉಮ್ಮನ್ ಚಾಂಡಿ ಪರ ವಕಾಲತ್ತು ವಹಿಸಿದ್ದು, ಬುಖಾರಿ ಫತ್ವ ಹೊರಡಿಸಿದ್ದು, ಓವೈಸಿ ಹೇಳಿಕೆ, ಇಮ್ರಾನ್ ಮಸೂದ್ ಹೇಳಿಕೆಗಳ ಬಗ್ಗೆ ಚಕಾರವೆತ್ತದ ಸಾಹಿತಿಗಳು ಬಿಜೆಪಿಯನ್ನು ಕೋಮುವಾದಿ ಎಂದು ಕರೆದು, ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಈ ಸಾಹಿತಿಗಳು ನಮ್ಮ ಬಗ್ಗೆ ಅಪ ಪ್ರಚಾರ ಮಾಡಿದಷ್ಟೂ ಬಿಜೆಪಿ ಮತಬ್ಯಾಂಕ್ ಹೆಚ್ಚುತ್ತಾ ಹೋಗುತ್ತಿದೆ ಎಂದು ಅಭಿಪ್ರಾಯಪಟ್ಟರು.