ಕೋಡಿಹಳ್ಳಿ-ಉಯ್ಯಂಬಳ್ಳಿ ವ್ಯಾಪ್ತಿಯಲ್ಲಿ ಶಿವಕುಮಾರ್ ಮತಯಾಚನೆ
ಕನಕಪುರ: ಸಂಸದರಾದ ಕೆಲವೇ ತಿಂಗಳುಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸುವ ಮೂಲಕ ಮಾದರಿಯಾಗಿ ನಿಂತಿರುವ ಡಿ.ಕೆ.ಸುರೇಶ್ ಬೆಂಬಲಿಸಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ತಾಲೂಕಿನ ಕೋಡಿಹಳ್ಳಿ-ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಕೋಡಿಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ತಮ್ಮ ಕುಟುಂಬ 10 ಎಕರೆ ಭೂಮಿ ನೀಡಿದೆ. ಈಗಾಗಲೇ ಪದವಿ, ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಸದ್ಯದಲ್ಲೇ ಐಟಿಐ ಕಾಲೇಜು, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಪ್ರಾರಂಭಗೊಳ್ಳಲಿವೆ ಎಂದರು. ಮಾಜಿ ವಿಪ ಸದಸ್ಯ ಎಸ್.ರವಿ, ಜಿಪಂ ಸದಸ್ಯ ಇಕ್ಬಾಲ್ ಹುಸೇನ್, ತಾಪಂ ಅಧ್ಯಕ್ಷೆ ಸಿದ್ಧಿಕಾಪರ್ವೀನ್, ಮುಖಂಡರಾದ ಸೂರನಹಳ್ಳಿ ಜಯರಾಂ, ಹೊನ್ನಿಗನಹಳ್ಳಿ ಶ್ರೀಕಂಠು, ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯದೇವ್ ಇದ್ದರು.