ಕ್ಷೇತ್ರದ ಅಭಿವೃದ್ಧಿಗೆ 'ಕೈ' ಹಿಡೀರಿ: ಯೋಗೇಶ್ವರ್
ಚನ್ನಪಟ್ಟಣ: ಜನರ ಸಮಸ್ಯೆಗೆ ಸದಾಕಾಲ ಸ್ಪಂದಿಸುವ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸುವ ಉತ್ಸಾಹಿ ಯುವ ಅಭ್ಯರ್ಥಿ ಡಿ.ಕೆ.ಸುರೇಶ್ ಬೆಂಬಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ, ಸಮಗ್ರ ನೀರಾವರಿ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ತಾಲೂಕಿನ ಜನತೆ ಸುರೇಶ್ರನ್ನು ಸಂಸದರಾಗಿ ಆಯ್ಕೆ ಮಾಡಬೇಕಿದೆ ಎಂದರು.
ಅತಿ ವಿಶ್ವಾಸ ಬೇಡ: ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಖಚಿತ. ಹಾಗೆಂದು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗದೆ ಪ್ರತಿಯೊಬ್ಬ ಮತದಾರರನ್ನು ಮುಟ್ಟುವ ಕೆಲಸ ಮಾಡಬೇಕೆಂದರು.
ಕೆಲಸ ನೋಡಿ ಮತ ಕೊಡಿ: ನಾನು ಕೇವಲ 6 ತಿಂಗಳ ಅವಧಿ ಮಾತ್ರ ಸಂಸದನಾಗಿದ್ದರೂ ಹಿಂದಿನವರು ಮಾಡದ ಕೆಲಸವನ್ನು ಮಾಡಿದ್ದೇನೆ ಎಂಬ ನಂಬಿಕೆ ಇದೆ. ನನ್ನ ಕೆಲಸ ನೋಡಿ ಮತ ನೀಡಿ ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದರು. ಸ್ಥಳೀಯ ಮುಖಂಡರಾದ ರಘುನಂದನ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಮುಖಂಡರಾದ ರಾಂಪುರ ಮಲುವೇಗೌಡ, ಅಕ್ಕೂರು ಶೇಖರ್, ಎಚ್.ಎಸ್.ಕಾಂತರಾಜು, ಪಾಳ್ಯ ಮಹದೇವು, ಪಿ.ಡಿ.ರಾಜು ಮತ್ತಿತರರು ಉಪಸ್ಥಿತರಿದ್ದರು.