ಡಿಕೆ ಬ್ರದರ್ಸ್ ವಿರುದ್ಧ ಜಿಲ್ಲಾ ಬಿಜೆಪಿ ಗರಂ
ಕನಕಪುರ: ಕನಕಪುರ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ. ಎಲ್ಲವನ್ನು ತಮ್ಮ ಸಾಧನೆ ಎಂದು ಡಿಕೆಶಿ ಸೋದರರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾಗರಾಜು ಟೀಕಿಸಿದ್ದಾರೆ.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನಕಪುರ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಬಿಜೆಪಿ ಸರ್ಕಾರ, ಬಡಜನರಿಗೆ ನೀಡಿದ ಮೂರು ಸಾವಿರ ನಿವೇಶನಗಳಿಗೆ ಹಣ ನೀಡಿದ್ದು ಬಿಜೆಪಿ ಸರ್ಕಾರ, ಪಟ್ಟಣದ ನೂರು ಹಾಸಿಗೆ ಆಸ್ಪತ್ರೆ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ಮೊದಲಾದವುಗಳು ಕನಕಪುರಕ್ಕೆ ಬಿಜೆಪಿ ಸರ್ಕಾರದ ಕೊಡುಗೆಗಳಾಗಿವೆ. ಶಾಸಕರು ಎಲ್ಲವನ್ನೂ ತಮ್ಮ ಸಾಧನೆ ಎಂದೇ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಬಿ.ನಾಗರಾಜು ಆರೋಪಿಸಿದರು.