ತೃತೀಯ ರಂಗ ಅಧಿಕಾರಕ್ಕೆ
ಮಾಗಡಿ: ತೃತೀಯ ರಂಗ ದೇಶದ ಚುಕ್ಕಾಣಿ ಹಿಡಿಲಿದ್ದು, ಜೆಡಿಎಸ್ ರಾಷ್ಟ್ರೀಯ ನಾಯಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತೆ ಪ್ರಧಾನ ಮಂತ್ರಿಯಾಗುವ ಯೋಗವಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಭವಿಷ್ಯ ನುಡಿದರು.
ಶನಿವಾರ ಮನೆದೇವರಾದ ನೇರಳೆಕೆರೆ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,
ಈ ಬಾರಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ. ಮುಂದಿನ ದಿನದಲ್ಲಿ ಆ ಪಕ್ಷ ನಶಿಸಿ ಹೋಗಲಿದೆ ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಮತದಾರರು ಈ ಬಾರಿ ಜೆಡಿಎಸ್ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಸುರೇಶ್ ಅಂಧ ದರ್ಬಾರ್: ಸಂಸದರಾಗಿ 8 ತಿಂಗಳು ಆಡಳಿತ ನಡೆಸಿದ ಡಿ.ಕೆ. ಸುರೇಶ್ ಅಂಧ ದರ್ಬಾರಿಗೆ ಕ್ಷೇತ್ರದ ಜನತೆ ಹಾಗು ಅಧಿಕಾರಿಗಳು ರೋಸಿ ಹೋಗಿದ್ದಾರೆ. ಈ ಬಾರಿ ತೃತೀಯ ರಂಗ ಆಡಳಿತ ಚುಕ್ಕಾಣಿ ಹಿಡಿಯುವುದರಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಮತ್ತೆ ರೈತಪರ ಶಕ್ತಿ ನಿರ್ಮಾಣಕ್ಕಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕಿದೆ. ಇದೊಂದು ಸುವರ್ಣ ಅವಕಾಶವಿದ್ದು, ಕಾರ್ಯಕರ್ತರು ಸನ್ನದ್ಧರಾಗಬೇಕು ಕಿವಿಮಾತು ಹೇಳಿದರು.
ಸ್ವಾಭಿಮಾನ ಮೆರೆಯಬೇಕು: ರಾಜ್ಯದಲ್ಲಿ ಏ.17 ರಂದು ನಡೆಯಲಿರುವ ಚುನಾವಣೆಯ ಮಹಾಯುದ್ಧಕ್ಕೆ ಕಾರ್ಯಕರ್ತ ಸೈನಿಕರು ಸಜ್ಜಾಗಬೇಕು. ಬೂತ್ ಮಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ರೆಡ್ಡಿಗೆ ಅಧಿಕ ಮತಹಾಕಿಸಿ ಕ್ಷೇತ್ರದಿಂದ ಕನಿಷ್ಠ 20 ಸಾವಿರ ಅಧಿಕ ಮತ ಕೊಡಿಸುವ ಜವಾಬ್ದಾರಿ ನಮ್ಮದು ಎಂದರು. ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ ಮಾತನಾಡಿದರು. ಬಗಿನಗೆರೆ ರಾಮಣ್ಣ, ತಾಪಂ ಸದಸ್ಯ ಶಾಂತಮ್ಮ ನರಸಿಂಹಮೂರ್ತಿ, ಮಾಜಿ ಸದಸ್ಯ ಜಿ.ವಿ.ರಾಮಣ್ಣ, ತಿಪ್ಪಸಂದ್ರ ವೆಂಕಟೇಶ್, ರಾಜಣ್ಣ, ಮೂರ್ತಿ, ಕೃಷ್ಣಪ್ಪ, ದೊಡ್ಡ ನರಸಿಂಹಯ್ಯ, ನಾಗರಾಜು, ತಿಮ್ಮಯ್ಯ, ಕಲ್ಲು ಕೆಂಪಣ್ಣ, ನವೀನ್ ಮತ್ತಿತರರು ಉಪಸ್ಥಿತರಿದ್ದರು.