ಮಾಲೂರು ರಸ್ತೆಗಳ ಗೋಳು ಕೇಳೋರಿಲ್ಲ!
ಮಾಲೂರು: ಪಟ್ಟಣದ ಒಳಚರಂಡಿ ಕಾಮಗಾರಿ ಸ್ಥಗಿತದಿಂದ ಕಂಗೆಟ್ಟಿದ್ದ ಪಟ್ಟಣ ಜನರು ಇದೀಗ ರಸ್ತೆ ಡಾಂಬರೀಕರಣ ಅರ್ಧಂಬರ್ಧ ಕಾಮಗಾರಿಯಿಂದಾಗಿ ಪರಿತಪಿಸುತ್ತಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಳೆದ ಎರಡು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ನಿಂತು ಹೋಗಿದೆ. ರಸ್ತೆಗಳಿಗೆ ಹೂಸದಾಗಿ ಹಾಕಲಾಗಿದ್ದ ಜಲ್ಲಿ ಕಲ್ಲು ಗಳು ಮೇಲೆದ್ದು ಬಂದಿವೆ. ಪಾದಚಾರಿ ಸೇರಿದಂತೆ ವಾಹನ ಸಂಚಾರಕ್ಕೂ ಬಹಳ ತೊಂದರೆ ಯಾಗುತ್ತಿದೆ. ಪಟ್ಟಣದ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಯನ್ನು ಇ ಟೆಂಡರ್ ಮೂಲಕ ಗುತ್ತಿಗೆ ಪಡೆದಿದ್ದ ಆಂಧ್ರದ ಬಿಎಸ್ಆರ್ ಕಂಪನಿಯು ಶ್ರೀನಿವಾಸಪುರದ ಚಂದ್ರಶೇಖರ್ರವರಿಗೆ ಉಪಗುತ್ತಿಗೆ ರೂಪದಲ್ಲಿ ನೀಡಿತ್ತು. ಗುತ್ತಿಗೆದಾರ ಚಂದ್ರಶೇಖರ್ ಅವರು ಮಾಲೂರು ಪಟ್ಟಣದ ರಸ್ತೆಗಳ ಕಾಮಗಾರಿಯನ್ನು ಬೆಂಗಳೂರಿನ ಭಾಸ್ಕರ್ ರವರಿಗೆ ನೀಡಿದ್ದರು. ಇದರ ಪರಿಣಾಮ ಕಳೆದ ಫೆಬ್ರುವರಿ ಕಾಮಗಾರಿ ಪ್ರಾರಂಭಿಸಿದ್ದರು. ಜೆಸಿಬಿ ಮೂಲಕ ರಸ್ತೆಗಳನ್ನು ಕಿತ್ತು, ಹೊಸದಾಗಿ ಜಲಿಕಲ್ಲು ಹಾಕಲಾಗಿತ್ತು. ಕಾಮಗಾರಿ ನಡೆಸುತ್ತಿದ್ದ ಭಾಸ್ಕರ್ರವರಿಗೆ ಕಾಮಗಾರಿ ಒಪ್ಪಂದದ ಕರಾರು ಮಾಡಿಕೊಡದ ಹಿನ್ನೆಲೆಯಲ್ಲಿ ಕಾಮಗಾರಿ ನಿಂತಿದೆ. ಏ.27ರಂದು ಮಾಲೂರಿನಲ್ಲಿ ಸುಪ್ರಸಿದ್ಧ ಹೂವಿನ ಕರಗ ನಡೆಯಲಿದೆ. ಕರಗ ಸಂಚಾರಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಈ ವಿಷಯವು ಪಟ್ಟಣದ ಜನತೆಯ ಅಂತಕಕ್ಕೆ ಕಾರಣವಾಗಿದೆ. ಹಾಗಾಗಿ, ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜೂಜು ಅಡ್ಡೆಮೇಲೆ ದಾಳಿ: 8 ಮಂದಿ ಬಂಧನ
ಬಾಗೇಪಲ್ಲಿ: ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ಅಧಿಕಾರಿಗಳು ಜೂಜು ಅಡ್ಡೆಮೇಲೆ ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿ 4 ಬೈಕ್ ವಶಪಡಿಸಿಕೊಂಡಿರುವ ಘಟನೆ ಬಾಗೇಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರ ಆದೇಶದ ಮೇರೆಗೆ ಅಪರಾಧ ಪತ್ತೆದಳದ ಎಸ್ಐ ರವೀಂದ್ರ ನೇತೃತ್ವದಲ್ಲಿ ಸಿಬ್ಬಂದಿ ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 7 ರ ಟೋಲ್ ಪ್ಲಾಜಾ ಸಮೀಪದ ಇಟ್ಟಿಗೆ ಗೂಡು ತಯಾರಿಸುವ ಕಾರ್ಖಾನೆಯಲ್ಲಿ ಜೂಜಾಡುತ್ತಿದ್ದಾಗ ದಾಳಿ ನಡೆಸಿದೆ. ಜೂಜಾಟದಲ್ಲಿ ತೊಡಗಿದ್ದ ಗುಡಿಬಂಡೆ ತಾಲೂಕಿನ ನಿಲುಗುಂಬು ಗ್ರಾಮದ ಗಂಗಿರೆಡ್ಡಿ, ಬಾಗೇಪಲ್ಲಿ ಟಿ.ಬಿ. ಕ್ರಾಸ್ ನ ಕೃಷ್ಣಾರೆಡ್ಡಿ, ಅಶ್ವತ್ಥಪ್ಪ, ಶ್ರೀನಿವಾಸ್, ಬಾಲರಾಜು, ಶ್ರೀನಿವಾಸ, ನರಸಿಂಹರೆಡ್ಡಿ, ಹೊಸಹುಡ್ಯ ಗ್ರಾಮದ ವೆಂಕಟರೆಡ್ಡಿ ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ 10 ಸಾವಿರ ಮತ್ತು 4 ಬೈಕ್ ವಶಪಡಿಸಿಕೊಂಡಿದ್ದಾರೆ. ಜೂಜುಕೋರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.