ಸೂಲಿಬೆಲೆಯ ದೊಡ್ಡಕೋಲಿಗದಲ್ಲಿ ಮನೆಗೆ ಬೆಂಕಿ
ಸೂಲಿಬೆಲೆ: ಇಲ್ಲಿಗೆ ಸಮೀಪದ ದೊಡ್ಡಕೋಲಿಗ ಗ್ರಾಮದಲ್ಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಇಡೀ ಮನೆ ಸುಟ್ಟುಹೋಗಿರುವ ಘಟನೆ ಶನಿವಾರ ನಡೆದಿದೆ.
ಸಕಾಲಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ ಕಾರಣ, ಬೆಂಕಿಯಿಂದಾಗಬಹುದಾದ ಭಾರೀ ಅನಾಹುತ ತಪ್ಪಿದಂತಾಗಿದೆ. ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ದೊಡ್ಡಕೋಲಿಗ ಗ್ರಾಮದ ಸೊಣ್ಣಪ್ಪ ಎಂಬುವರಿಗೆ ಸೇರಿದ್ದ ಹೆಂಚಿನ ಮನೆಯಿದ್ದು, ಶನಿವಾರ ಮನೆಯವರೆಲ್ಲ ಕೆಲಸದ ನಿಮಿತ್ತ ಬೀಗ ಹಾಕಿಕೊಂಡು ಹೊರ ಹೋಗಿದ್ದರು. ಬೆಳಗ್ಗೆ 11 ಗಂಟೆ ಸಮಯದಲ್ಲಿ ಮನೆಯ ಹೆಂಚು ಸಂದಿಗಳಿಂದ ಅಪಾರ ಹೊಗೆ ಬರುತ್ತಿರುವದನ್ನು ಅರಿತ ಅಕ್ಕಪಕ್ಕದವರು ಮನೆಯ ಬಾಗಿಲು ಒಡೆದು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡಿದೆ. ಕೂಡಲೇ ತಮ್ಮ ತಮ್ಮ ಮನೆಗಳಿಂದ ನೀರನ್ನು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ .ಬೆಂಕಿ ನಿಯಂತ್ರಣಕ್ಕೆ ಬಾರದೇ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಷ್ಚರಲ್ಲಿ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಸೇರಿದಂತೆ ದವಸ, ಧಾನ್ಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.