ಕೌರವರ ಆಡಳಿತ ತೊಲಗಿಸಲು ಬಿಜೆಪಿ ಸರ್ಕಾರ ಅಗತ್ಯ
ಕನಕಪುರ: ಕೌರವರ ಆಡಳಿತ ತೊಲಗಿಸಿ ಧರ್ಮರಾಜ್ಯ ಸ್ಥಾಪಿಸಲು, ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಬುದ್ಧಿ ಕಲಿಸಲು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಸ್ಥಾಪನೆ ಅಗತ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಹೇಳಿದ್ದಾರೆ.
ಅವರು ಕನಕಪುರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಪರವಾಗಿ ಮತಯಾಚನೆ ಮಾಡಿ ಇಲ್ಲಿನ ಚನ್ನಬಸಪ್ಪ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಸಚಿವ ರಾಮಚಂದ್ರಗೌಡ, ಮಾಜಿ ಸಂಸದೆ ತೇಜಸ್ವಿನಿ ಗೌಡ, ಜಿಲ್ಲಾಧ್ಯಕ್ಷ ಬಿ. ನಾಗರಾಜು, ತಾ.ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಾನಂದ, ಬ್ಲಾಕ್ ಅಧ್ಯಕ್ಷ ಶ್ರೀನಿವಾಸ್, ಎಬಿವಿಪಿಯ ರಘುರಾಂ, ರವೀಂದ್ರಬಾಬು ಪಾಲ್ಗೊಂಡಿದ್ದರು.
ಗುಜರಾತ್ ಅನ್ನು ಕೇವಲ ಹತ್ತು ವರ್ಷಗಳಲ್ಲಿಯೇ ದೇಶದಲ್ಲಿ ಮಾದರಿ ರಾಜ್ಯವನ್ನಾಗಿಸಿದ ಮೋದಿಯವರು ಪ್ರಧಾನಿಯಾದರೆ ದೇಶದ ಆಂತರಿಕ, ಬಾಹ್ಯ ಭದ್ರತೆಗೆ ಸಹಕಾರಿಯಾಗುತ್ತದೆ. ಸೈನ್ಯಕ್ಕೆ ನೈತಿಕ ಬಲ ಮತ್ತು ಬೆಂಬಲ ಸಿಗುತ್ತದೆ ಎಂದು ಈಶ್ವರಪ್ಪ ನುಡಿದರು.
ಭ್ರಷ್ಟ ಡಿಕೆಶಿ: ಮಾಜಿ ಸಂಸದೆ ತೇಜಸ್ವಿನಿ ಮಾತನಾಡಿ, ಜಾತೀಯತೆ, ಸ್ವಜನಪಕ್ಷಪಾತಗಳಿಂದ ಪಕ್ಷದಲ್ಲಿದ್ದುಕೊಂಡೇ ಪಕ್ಷದ್ರೋಹವನ್ನು ನಡೆಸುತ್ತಿರುವ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಜೆಡಿಎಸ್, ಕುಮಾರಸ್ವಾಮಿಯವರ ಸಡಿಲ ನೀತಿಯೇ ಕಾರಣ ಎಂದು ಟೀಕಿಸಿದರು.
ಸ್ವಾರ್ಥ ರಾಜಕಾರಣದ ಪ್ರತೀಕವಾದ ಡಿಕೆಶಿ, ಈಗ ಶಾಸಕ ಯೋಗೇಶ್ವರ್ ಜೊತೆಗೂಡಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಶಿವಕುಮಾರ್ರನ್ನು ಗೂಳಿಯಂತೆ ಬಿಟ್ಟಿದ್ದಾರೆ, ಭ್ರಷ್ಟತನದ ಆರೋಪದ ಮೇಲೆ ಹೊರಗಿರಿಸಿ ಮತ್ತೆ ಸಚಿವ ಸ್ಥಾನ ನೀಡಿರುವ ಕಾಂಗ್ರೆಸ್ನ ದ್ವಿಮುಖನೀತಿ, ಜಾತಿ, ದ್ವೇಷದ ರಾಜಕೀಯಕ್ಕೆ ಕೊನೆಹಾಡಲು ದೇಶಭಕ್ತ ಬಿಜೆಪಿಯನ್ನು ಆರಿಸಬೇಕು ಎಂದು ತೇಜಸ್ವಿನಿ ಕರೆ ನೀಡಿದರು.
ಸುರೇಶ್ರನ್ನು ಹಾಡಿಹೊಗಳಿದ ತೇಜಸ್ವಿನಿ: ಕನಕಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಿರಂತರವಾಗಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿನಿ, ಅಚ್ಚರಿ ಎಂಬಂತೆ ಸಂಸದ ಡಿ.ಕೆ.ಸುರೇಶ್ ಅವರನ್ನು ಹಾಡಿ ಹೊಗಳಿದರು. ಸುರೇಶಣ್ಣನವರ ಕಾರ್ಯದಕ್ಷತೆ, ಸಂಘಟನಾಶಕ್ತಿ, ಕ್ರಿಯಾಶೀಲತೆಗಳೇ ಡಿಕೆಶಿಯವರ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೊಗಳಿದ ತೇಜಸ್ವಿನಿ, ಡಿ.ಕೆ.ಸುರೇಶ್ ಅವರ ಸೇವೆ ಕನಕಪುರಕ್ಕೆ ಅಗತ್ಯವಿದೆ, ಬೇಕಾದರೆ ಡಿಕೆಶಿ ಸಂಸತ್ಗೆ ಹೋಗಲಿ ಎಂದು ಹೇಳಿದರು.
ಸಚಿವ ಸ್ಥಾನ ತೊರೆಯಲಿ: ಮಾಜಿಸಚಿವ ರಾಮಚಂದ್ರಗೌಡ ಮಾತನಾಡಿ, ಪರೀಕ್ಷಾ ಸಮಯದಲ್ಲಿ ಕರೆಂಟ್ ನೀಡಲು ವಿಫಲರಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಡನೆ ಹೊಂದಾಣಿಕೆ ಇಲ್ಲದ ಕಾರಣ ಇಲಾಖೆಗೆ ಹಣ ಬಿಡುಗಡೆಯಾಗದೆ ವಿದ್ಯಾರ್ಥಿಗಳು, ರೈತರು ತೊಂದರೆ ಅನುಭವಿಸಬೇಕಾಗಿದೆ, ಡಿಕೆಶಿ ಸಚಿವ ಸ್ಥಾನ ತೊರೆಯುವುದೇ ಲೇಸು ಎಂದರು. ಅಭ್ಯರ್ಥಿ ಮುನಿರಾಜುಗೌಡ ಮಾತನಾಡಿ, ದೇಶದಲ್ಲಿ ಮಹತ್ವದ ಬದಲಾವಣೆ ತರುವ ಪರ್ವಕಾಲದಲ್ಲಿ ಬೆಂಗ್ರಾ ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ಮೋದಿಯವರು ಪ್ರಧಾನಿಯಾಗಲು ಮತಚಲಾಯಿಸಬೇಕು. ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಭದ್ರತೆ, ರಕ್ಷಣೆಗಳಿಲ್ಲ, ಭಯದಲ್ಲಿ ಬಾಳುವಂತಾಗಿದೆ. ತಾವು ಕಾರ್ಯಕರ್ತರ ಬೆಂಗಾವಲಾಗಿ ನಿಲ್ಲುವ ಭರವಸೆ ನೀಡಿದರು.
ಮಾತಿನ ಚಕಮಕಿ: ಕನಕಪುರ ತಾಲೂಕು ಕೋಡಿಹಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಮುನಿರಾಜುಗೌಡ ಪರವಾಗಿ ಮಾಜಿ ಸಂಸದೆ ತೇಜಸ್ವಿನಿ ಮತಯಾಚಿಸುವ ವೇಳೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಕೂಡಾ ಚಕಮಕಿ ನಡೆಯಿತು. ತೇಜಸ್ವಿನಿಯವರು ಸಚಿವ ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾಗ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಲೆಕ್ಕಿಸದೆ ಭಾಷಣ ಮುಂದುವರೆಸಲು ಯತ್ನಿಸಿದಾಗ ಅವಾಚ್ಯ ಶಬ್ದಗಳ ನಿಂದನೆಗೂ ಈಡಾಗಬೇಕಾಯಿತು. ಇದರಿಂದಾಗಿ ಪ್ರಚಾರಸಭೆ ಅರ್ಧಕ್ಕೇ ನಿಂತು ಹುಣಸನಹಳ್ಳಿಕಡೆಗೆ ತೆರಳಬೇಕಾಯಿತು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಭ್ಯರ್ಥಿ ಮುನಿರಾಜುಗೌಡ, ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಭಾಷಣಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ, ಕೋಡಿಹಳ್ಳಿ ಆರಕ್ಷಕ ಉಪನಿರೀಕ್ಷಕರು ಪುಂಡಾಟಿಕೆಯನ್ನು ನಿಯಂತ್ರಿಸಿ, ಭದ್ರತೆ ಒದಗಿಸುವ ಬದಲಾಗಿ ಬಿಜೆಪಿ ಕಾರ್ಯಕರ್ತರನ್ನೇ ದೂರಿ ಕಳುಹಿಸಿದ್ದಾರೆ. ಡಿಕೆಶಿ ಏಜೆಂಟರಂತೆ ವರ್ತಿಸಿದ್ದಾರೆಎಂದು ಆರೋಪಿಸಿದ್ದಾರೆ, ಈಬಗ್ಗೆ ಚುನಾವಣಾ ಆಯೋಗಕ್ಕೆ ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.