ದಾಖಲೆ ಇಲ್ಲದ ರು. 3.95 ಲಕ್ಷ ಹಣ ವಶ
ಸೂಲಿಬೆಲೆ: ಸೂಲಿಬೆಲೆ-ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ 207 ಉಪ್ಪಾರಹಳ್ಳಿ ಚೆಕ್ ಪೋಸ್ಟ್ ಬಳಿ ಭಾನುವಾರ ಕಾ ರ್ಯಾಚರಣಿ ನಡೆಸಿರುವ ಚುನಾವಣಾ ಜಾಗೃತ ದಳ ಅಧಿಕಾರಿಗಳು ಸೂಕ್ತ ದಾಖಲೆ ಇಲ್ಲದ ರು.3.95 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರದಿಂದ ಉಪ್ಪಾರಹಳ್ಳಿ ಚೆಕ್ ಪೋಸ್ಟ್ ಮೂಲಕ ಆಲಪ್ಪನಹಳ್ಳಿಗೆ ಹೋಗುತ್ತಿದ್ದ ಇನೋವಾ ಕಾರನ್ನು ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ರು.1 ಲಕ್ಷ ಹಣ ಪತ್ತೆಯಾಯಿತು. ಇದಾದ ನಂತರ ಮತ್ತೋಂದು ಪ್ರಕರಣದಲ್ಲಿ ದೇವನಹಳ್ಳಿಯಿಂದ ಹೊಸಕೋಟೆಯತ್ತ ಬರುತ್ತಿದ್ದ ಕಾರಿನಲ್ಲಿ 2.95 ಲಕ್ಷ ಹಣ ಪತ್ತೆಯಾಗಿದೆ.ಈ ಎರಡು ಪ್ರಕರಣಗಳಲ್ಲಿ ಹಣ ಸಾಗಟಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣ ಹೊಸಕೋಟೆ ಪೊಲೀಸರಿಗೆ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಮತ್ತು ಇದೇ ಚೆಕೆ ಪೋಸ್ಟ್ನಲ್ಲಿ ಚುನಾವಣೆ ಪ್ರಚಾರ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಎಚ್. ನಟರಾಜ್ ತಿಳಿಸಿದ್ದಾರೆ.
ಚುನಾವಣೆ: ಬೀದಿ ನಾಟಕದಿಂದ ಜಾಗೃತಿ
ರಾಮನಗರ: ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕು ಕೇಂದ್ರಗಳು, ಪ್ರಮುಖ ಹೋಬಳಿ ಕೇಂದ್ರಗಳು ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕ ಆಯೋಜಿಸಲಾಗುತ್ತಿದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಈ ನಾಟಕ ಪ್ರದರ್ಶನಗಳನ್ನು ಪ್ರಾಯೋಜಿಸುತ್ತಿವೆ.