ನಮ್ಮ ಪಕ್ಷದ ಅಭ್ಯರ್ಥಿ ಗೆಲವು ನಿಶ್ಚಿತ
ಚನ್ನಪಟ್ಟಣ: ಗ್ರಾಮಾಂತರ ಕ್ಷೇತ್ರದಲ್ಲಿ ಮೋದಿ, ರಾಹುಲ್ ಅಲೆಗಳ್ಯಾವುದೂ ಇಲ್ಲ, ಇಲ್ಲಿರುವುದು ದೇವೇಗೌಡ ಮತ್ತು ಕುಮಾರಸ್ವಾಮಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪರವಾದ ಅಲೆ ಮಾತ್ರ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್‌ಗೆ ಮತದಾರರ ಒಲವು ಹೆಚ್ಚಿದ್ದು ನಮ್ಮ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸುವುದು ನಿಸ್ಸಂಶಯ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಪರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ, ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳೇ ಜೆಡಿಎಸ್ ಗೆಲವಿಗೆ ಶ್ರೀರಕ್ಷೆಯಾಗಿದ್ದು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಮಾತ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿರುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಸಿ ಅಶ್ವತ್ಥ್ ಈ ತಾಲೂಕು ಜೆಡಿಎಸ್ ಭದ್ರ ಕೋಟೆಯಾಗಿದ್ದು ನಮ್ಮಪಕ್ಷದ ಕಾರ್ಯಕರ್ತರ ಅತಿಯಾದ ವಿಶ್ವಾಸದಿಂದಾಗಿ ಈ ಹಿಂದಿನ ಚುನಾವಣೆಯಲ್ಲಿ ಪರಾಜಿತರಾಗಿದ್ದೇವೆ ವಿನಾ ಬೇರೆ ಕಾರಣಕ್ಕಾಗಿ ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಸಜ್ಜನ ಅಭ್ಯರ್ಥಿ ಪ್ರಭಾಕರ ರೆಡ್ಡಿ ಗೆಲವಿಗೆ ಪ್ರತಿಯೊಬ್ಬ ಕಾರ್ಯಕರ್ತನೂ ಟೊಂಕ ಕಟ್ಟಿ ನಿಂತಿದ್ದು ಈ ತಾಲೂಕಿನಲ್ಲಿ ಜೆಡಿಎಸ್‌ಗೆ ಅತಿ ಹೆಚ್ಚಿನ ಮತ ಚಲಾವಣೆಯಾಗಲಿದೆ ಎಂದರು.
ನಾವೆಲ್ಲ ಒಂದಾಗಿದ್ದೇವೆ: ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸುವ ಉದ್ದೇಶದಿಂದ ನಮ್ಮ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ದುಡಿಯುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲದಿದ್ದು ಪಕ್ಷದ ಕೆಳಹಂತದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ವಿಪಕ್ಷ ಮುಖಂಡರು ಈರೀತಿ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪ್ರಭಾಕರ್ ರೆಡ್ಡಿ ಸಾಮಾನ್ಯರಂತೆ ಕಂಡರು ಜನಸೇವೆಗಾಗಿ ಸದಾಕಾಲ ತುಡಿಯುವ ಹೃದಯವಂತ ಅಭ್ಯರ್ಥಿಯಾಗಿದ್ದು ಇಂತಹವರ ಗೆಲವಿಗೆ ಎಲ್ಲರೂ ಮುಂದಾಗುವುದರೊಂದಿಗೆ ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸ ಬೇಕೆಂದು ಮನವಿ ಮಾಡಿದರು. ಪ್ರಚಾರದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಮುಖಂಡ ಸಿಂ.ಲಿಂ. ನಾಗರಾಜು, ರಾಂಪುರ ರಾಜಣ್ಣ ಪಾಲ್ಗೊಂಡಿದ್ದರು.